ಮೂಲ-ವಲಸಿಗ ಟಾಕ್​ವಾರ್ ಜೋರು

Social Media Post
Published on

ಯಲ್ಲಾಪುರ: ಇಷ್ಟು ದಿನಗಳ ಕಾಲ ಯಲ್ಲಾಪುರದಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಬಿಜೆಪಿ ಮೂಲ-ವಲಸಿಗರ ಕಿತ್ತಾಟ ಇದೀಗ ಸ್ಪೋಟಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಟಾಕ್ ವಾರ್​ಗೆ ಸಾಕ್ಷಿಯಾಗಿದೆ.

ಒಂದೆಡೆ ಬಹುತೇಕ ಬಿಜೆಪಿಯಿಂದ ಹೊರಬರಲು ಹೆಬ್ಬಾರ ಸಿದ್ಧರಾಗುತ್ತಿದ್ದಾರೆ ಎಂಬುದು ಬಹಿರಂಗವಾಗುತ್ತಿದ್ದಂತೆ ಟಾಕ್​ವಾರ್ ಜೋರಾಗಿಯೇ ಆರಂಭ ಗೊಂಡಿದೆ.

ಹೆಬ್ಬಾರ್ ಏನಂದಿದ್ದರು?: ವಿಧಾನಸಭೆ ಸುನಾವಣೆ ಮುಕ್ತಾಯವಾಗಿ ಪ್ರಯಾಸದ ಗೆಲುವು ದಾಖಲಿಸಿದ ಹೆಬ್ಬಾರ ತರುವಾಯ ಮೂಲ ಬಿಜೆಪಿಗರ ಅಸಹಕಾರದ ಕುರಿತಾಗಿ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು. ‘ವಿಧಾನ ಸಭೆ ಚನಾವಣೆಯಲ್ಲಿ ಬಿಜೆಪಿ ಮುಖಂಡರು ನನ್ನ ಬೆನ್ನಿಗೆ ಅಷ್ಟೇ ಅಲ್ಲ ಹೊಟ್ಟೆಗೂ ಚಾಕು ಹಾಕಿದ್ದಾರೆ. ಇದೂ ತುಂಬಾ ನೋವು ತಂದಿದೆ’ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.

ಒಂದು ಕಡೆ ಹೆಬ್ಬಾರ ಬಿಜೆಪಿ ತೊರೆಯುತ್ತಾರೆ ಎಂಬ ಮಾತು, ಇನ್ನೊಂದೆಡೆ ಮೂಲ ಬಿಜೆಪಿಗರ ಕುರಿತ ಬಹಿರಂಗ ಹೇಳಿಕೆಗಳು ಮೂಲ ಬಿಜೆಪಿಗರು ಕೆರಳಿ ಕೆಂಡಾಮಂಡಲರಾಗುವಂತೆ ಮಾಡಿದೆ. ಇದರ ಭಾಗವಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಟಾಕ್​ವಾರ್ ಪ್ರಾರಂಭಗೊಂಡಿದೆ. ಪಕ್ಷದ ಪದಾಧಿಕಾರಿಗಳ, ಕಾರ್ಯಕರ್ತರ ದೂಷಣೆ ಮಾಡಿದ ಬಗೆಗೆ ಜಾಲತಾಣಗಳಲ್ಲಿ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಬಿಜೆಪಿ ಪದಾಧಿಕಾರಿಗಳೇ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆಂದು ಹೇಳುವ ಮುನ್ನ ಶಾಸಕರು ನಮ್ಮ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ.

ಪ್ರಶ್ನೆಗಳ ಸುರಿಮಳೆ: ಯಲ್ಲಾಪುರದಲ್ಲಿ ಬಿಜೆಪಿ ಸಂಘಟನೆಯನ್ನು ಛಿದ್ರಗೊಳಿಸಲು ಹೊರಟವರು ಯಾರು? ಕಿರವತ್ತಿಯಲ್ಲಿ ಶಾಸಕರ ಬೆಂಬಲಿಗರಿಂದ ಗೌಳಿ ಸಮುದಾಯದವರ ಮೇಲೆ, ಪಕ್ಷದ ಪಧಾಧಿಕಾರಿಗಳ ಮೇಲೆ ಹಲ್ಲೆ ಆದಾಗ ಪದಾಧಿಕಾರಿಗಳು ನೆನಪಾಗಿಲ್ಲವೇ? ಮಂಡಳ ಅಧ್ಯಕ್ಷರು, ಮಂಡಳ ಪ್ರಧಾನ ಕಾರ್ಯದರ್ಶಿಗಳ ಮೇಲೆ ಶಾಸಕರ ಬೆಂಬಲಿಗರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಮುಂದಾದಾಗ ಪದಾಧಿಕಾರಿಗಳು ನೆನಪಿಗೆ ಬರಲಿಲ್ಲವೆ? ಮಹಾಶಕ್ತಿ ಕೇಂದ್ರ ಅಧ್ಯಕ್ಷರ ಮೇಲೆ ನಿಮ್ಮ ಬೆಂಬಲಿಗರು ಹಲ್ಲೆ ನಡೆಸಿದಾಗ ಪದಾಧಿಕಾರಿಗಳ ನೆನಪು ಇರಲಿಲ್ಲವೇ? ಎಂಬಿತ್ಯಾದಿ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಮಂತ್ರಿಯಾಗಿಯೂ ಕೆಡಿಸಿಸಿ ಅಧ್ಯಕ್ಷ ಸ್ಥಾನ ವನ್ನು ತಾವೇ ಅಲಂಕರಿಸಿದ್ದರಲ್ಲ ಆಗ ಕಾರ್ಯಕರ್ತ ನೆನಪಾಗಲಿಲ್ಲವೆ? ಕಾಂಗ್ರೆಸಿನ ಕೆಲ ಸದಸ್ಯರನ್ನು ಕೆ.ಡಿ.ಸಿ.ಸಿ ಬ್ಯಾಂಕ್ ಚುನಾವಣೆಯಲ್ಲಿ ಗೆಲ್ಲಸಿದಿರಲ್ಲ, ಆಗ ಪಧಾಧಿಕಾರಿಗಳು ನೆನಪಾಗಲಿಲ್ಲವೆ? ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಮ್ಮ ಬೆಂಬಲಿಗರಿಗೆ ಪಾರುಪತ್ಯ ನೀಡಿ ಅಧ್ಯಕ್ಷರ್ನ್ನಾಗಿ ಮಾಡಿದಾಗ ಬಿಜೆಪಿ ಕಾರ್ಯಕರ್ತ ನೆನಪಾಗಲಿಲ್ಲವೇ? ಎಂದೂ ಪ್ರಶ್ನಿಸಿದ್ದಾರೆ.

ಹೀಗೆ ನಿಮ್ಮ ರಾಜಕಾರಣಕ್ಕೆ ಪಕ್ಷದ ಕಾರ್ಯಕರ್ತರು ಬಲಿಯಾಗುತ್ತಿದ್ದಾರೆಂದು ಮೂಲ ಬಿಜೆಪಿ ಕಾರ್ಯಕರ್ತರು ಸಾಲು ಸಾಲು ಪ್ರಶ್ನೆ ಇಟ್ಟಿದ್ದಾರೆ. ಬೂದಿ ಮುಚ್ಚಿದ ಕೆಂಡದಂತಿದ್ದ ಮೂಲ ಹಾಗೂ ವಲಸಿಗರ ನಡುವಿನ ಕಿತ್ತಾಟ ಇದೀಗ ಬಹಿರಂಗವಾಗಿಯೇ ಆರಂಭವಾಗಿದೆ. ಇದು ಎಲ್ಲಿಯವರೆಗೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net