

ಬೇಲೂರು: ಚಿಕ್ಕ ಬಿಕ್ಕೋಡು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ ಜು.9ರಂದು ಸಂಪರ್ಕ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಚಿಕ್ಕ ಬಿಕ್ಕೋಡು ಗ್ರಾಮದ ನಿವಾಸಿ ಗಣೇಶ್ ತಿಳಿಸಿದರು.
ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಈ ಮಾರ್ಗದಲ್ಲಿ ಓಡಾಟ ದುಸ್ತರ. ಮಕ್ಕಳು, ವೃದ್ಧರು, ಮಹಿಳೆಯರು ಜೀವ ಕೈಯಲ್ಲಿ ಹಿಡಿದು ಓಡಾಡಬೇಕಿದೆ. ಐದಾರು ವರ್ಷದ ಹಿಂದೆ ಜಲ್ಲಿ, ಮಣ್ಣು ಹಾಕಲಾಗಿತ್ತು. ಈಗ ಅದು ಕಿತ್ತು ಹೋಗಿದೆ. ಇಷ್ಟೆಲ್ಲ ಆದರೂ ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಇತ್ತ ತಿರುಗಿಯೂ ನೋಡಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಶೀಘ್ರ ರಸ್ತೆ ದುರಸ್ತಿಪಡಿಸುವಂತೆ ಆಗ್ರಹಿಸಿ ರಸ್ತೆಗೆ ಬಾಳೆ ಗಿಡಗಳನ್ನು ನೆಟ್ಟು ಪ್ರತಿಭಟಿಸಲಾಗುವುದು. ಇದಕ್ಕೂ ಅಧಿಕಾರಿಗಳು, ಜನಪ್ರತಿನಿಧಿಗಳು ಬಗ್ಗದಿದ್ದರೆ ಮುಂದಿನ ದಿನಗಳಲ್ಲಿ ಬೇಲೂರು-ಸಕಲೇಶಪುರ ರಸ್ತೆ ಬಂದ್ ಮಾಡಿ ಸ್ಥಳಕ್ಕೆ ಬರುವವರೆಗೂ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಚಿಕ್ಕ ಬಿಕ್ಕೋಡು ಗ್ರಾಮದ ದಿಲೀಪ್, ಚಂದ್ರಶೇಟ್ಟಿ, ಪುನೀತ್, ಕಿರಣ್ ಸುದ್ದಿಗೋಷ್ಠಿಯಲ್ಲಿದ್ದರು.