

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶದ ಹಿನ್ನೆಲೆ ಸರ್ಕಾರದ ಗಮನ ಸೆಳೆಯಲು ಶುಕ್ರವಾರ 11 ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಲ್ಲಿನ ಸುವರ್ಣ ಗಾರ್ಡನ್ ಮತ್ತು ಕೊಂಡಸಕೊಪ್ಪದ ಬಳಿ ಪ್ರತಿಭಟನೆ ನಡೆಸಿದವು.
ಅತಿಥಿ ಶಿಕ್ಷಕರ ಕಾಯಂಗೊಳಿಸಿ: ಪ್ರತಿವರ್ಷ ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಮೆರಿಟ್ ಪದ್ಧತಿ ಕೈಬಿಟ್ಟು ಮೊದಲು ಕಾರ್ಯ ನಿರ್ವಹಿಸಿದವರಿಗೆ ಆದ್ಯತೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಅಥಿತಿ ಶಿಕ್ಷಕರಿಗೆ ಸೇವಾ ಭದ್ರತೆ, ಬೇಸಿಗೆ ರಜೆ ಸೇರಿ 12 ತಿಂಗಳು ವೇತನ, ವೇತನ ಹೆಚ್ಚಿಸುವುದು, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಸರ್ಕಾರಗಳು ಕೈಗೊಂಡ ನಿರ್ಣಯದಂತೆ ಅತಿಥಿ ಶಿಕ್ಷಕರನ್ನು ಕಾಯಂ ಗೊಳಿಸುವುದು ಹಾಗೂ ಜೀವ ವಿಮೆ ಸೌಲಭ್ಯ ಒದಗಿಸಬೇಕು ಎಂದು ಮನವಿ ಮೂಲಕ ಆಗ್ರಹಿಸಿದರು. ಅನಂತನಾಯ್ಕ, ಎನ್.ಲೋಲಾಕ್ಷಿ, ಬಸವರಾಜ ಕರಡಿಗುಡ್ಡ, ಗಂಗಾಧರ ಕಟ್ಟೆಕರ ಇತರರಿದ್ದರು.
ಮಾಸಾಶನ ಹೆಚ್ವಿಸುವಂತೆ ಮನವಿ: ರಾಜ್ಯದಲ್ಲಿರುವ 48 ಸಾವಿರ ದೇವದಾಸಿಯರಿಗೆ ನೀಡುವ ಮಾಸಾಶನವನ್ನು ಮೂರು ಸಾವಿರದಿಂದ ಐದು ಸಾವಿರ ರೂಪಾಯಿ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಮಹಿಳಾ ಅಭಿವದ್ಧಿ ಮತ್ತು ಸಂರಕ್ಷಣಾ ಸಂಸ್ಥೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮನವಿ ಅರ್ಪಿಸಿದರು. ದೇವದಾಸಿ ಮಹಿಳೆಯರಿಗೆ ವ್ಯವಸಾಯ ಮಾಡಲು 2 ಎಕರೆ ಜಮೀನು, ಪ್ರತಿ ತಿಂಗಳು ತಪ್ಪದೆ ಮಾಸಾಶನ, ಅಂತ್ಯೋದಯ ಪಡಿತರ ಚೀಟಿ, ಜೀವನೋಪಾಯ ಬಲ ಪಡಿಸಲು ಉಚಿತ ಸಾಲ ಸೌಲಭ್ಯ, ಅರ್ಹ ದೇವದಾಸಿ ಮಹಿಳೆಯರಿಗೆ ಹಾಗೂ ಅವರ ಮಕ್ಕಳಿಗೆ ಅಂಗನವಾಡಿ ಕಾರ್ಯಕರ್ತರಾಗಿ ಭರ್ತಿ ಮಾಡಿಕೊಳ್ಳಬೇಕೆಂದು ಮನವಿ ಮೂಲಕ ಒತ್ತಾಯಿಸಿದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಸೀತವ್ವ ಜೋಡಟ್ಟಿ, ಸಾವಿತ್ರಿ ಹಳಕಲ್ಲ, ಶಾಂತಾ ಮಾಂಗ, ಜಯಶ್ರೀ ದೊಡಮನಿ ಇದ್ದರು.
ಶೀಘ್ರ ಶಿಕ್ಷಕರ ನೇಮಕ ಮಾಡಿಕೊಳ್ಳಿ : ಖಾಲಿಯಿರುವ ಶಾಲಾ, ಕಾಲೇಜು ಶಿಕ್ಷಕರನ್ನು ಕೂಡಲೇ ನೇಮಕ ಮಾಡಿಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಕಳೆದ 10 ವರ್ಷದಿಂದ ಪ್ರಾಥಮಿಕ, ಪ್ರೌಢಶಿಕ್ಷಕರ ಹಾಗೂ ಪಿಯುಸಿ ಉಪನ್ಯಾಸಕರ ನೇಮಕಾತಿಯಾಗಿಲ್ಲ. ಪರಿಣಾಮ ಶಿಕ್ಷಣ ಕ್ಷೇತ್ರದ ಸುಧಾರಣೆ ಮಟ್ಟ ಕುಂಠಿತಗೊಂಡಿದ್ದು, ಕೂಡಲೇ ನೇಮಕಾತಿ ಮಾಡಿಕೊಳ್ಳಬೇಕು. ರಾಜ್ಯಾದ್ಯಂತ ಏಕಕಾಲಕ್ಕೆ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಪ್ರತಿಭಟನಾಕಾರು ಆಗ್ರಹಿಸಿದರು. ಲಕ್ಷ್ಮಣ ತುಕ್ಕನ್ನವರ,ಬಂಡು ನಾಯಿಕ,ಬಸವಂತ ಹಾದಿಮನಿ,ದೇವೆಂದ್ರ ಇತರರಿದ್ದರು.
ಎಸ್ಟಿಗೆ ಶಿಪಾರಸ್ಸು ಮಾಡುವಂತೆ ಒತ್ತಾಯ : ಅಂಬಿಗ, ಕೋಲಿ, ಕಬ್ಬಲಿಗ, ಕಬ್ಬೇರ, ಬೆಸ್ತ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಬಾಗಲಕೋಟೆ ಜಿಲ್ಲೆಯ ಅಖಿಲ ಕರ್ನಾಟಕ ಬೆಸ್ತ ಕೋಲಿ ಅಂಬಿಗರ ಜಾತಿ ಮೀಸಲಾತಿ ಹೋರಾಟ ಸಮಿತಿ ಸದಸ್ಯರು ಧರಣಿ ಸತ್ಯಾಗ್ರಹ ನಡೆಸಿದರು.
ಈಗಾಗಲೇ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿರುವ ಟೋಕರೆ ಕೋಳಿ ಮತ್ತು ಕೋಯಾ ಜಾತಿಗಳಿಂದ ಬಿಟ್ಟು ಹೋದ ಜಾತಿಗಳನ್ನು ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಪಾರಸ್ಸು ಮಾಡಬೇಕು. ಟೋಕರೆ ಕೋಳಿ ಜಾತಿ ಪ್ರಮಾಣದ ಪತ್ರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಬೇಕು. ಅಂಬಿಗ, ಬೆಸ್ತ, ಕೋಳಿ,ಕಬ್ಬಲಿಗ ಇದರ ಸಮನಾರ್ಥ ಜಾತಿಗಳ ಅಭಿವೃದ್ಧಿಗಾಗಿ ನಿಜ ಶರಣ ಅಂಬಿಗ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ. ಅನುದಾನ ನೀಡಬೇಕು ಎಂದು ಹಕ್ಕೋತ್ತಾಯ ಪಡಿಸಿದರು. ಯಮನಪ್ಪ ಮಡಿಕೇರ, ದೇವರಾಯಪ್ಪ ಮೂಲಿಮನಿ,ಸಂಜಯ ಪಾಟೀಲ,ಸಂಗಪ್ಪ ಪ್ಯಾಟಿ ಇತರರಿದ್ದರು.
ವಿಕಲಚೇತನರ ಮಾಸಿಕ ವೇತನ ಹೆಚ್ಚಿಸಿ: ವಿಕಲಚೇತನರ ಮಾಸಿಕ ವೇತನವನ್ನು ಶೇ.75ಕ್ಕಿಂತ ಹೆಚ್ಚು ಅಂಗ ವೈಪಲ್ಯವಿರುವವರಿಗೆ 5000 ರೂ. ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ವಿಕಲಚೇತನ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು. ವಿಕಲಚೇತನರಿಗೆ ಸ್ವಾವಲಂಭಿ ಜೀವನ ನಡೆಸಲು ಸರ್ಕಾರದಿಂದ 5 ಲಕ್ಷ ರೂ.ಸಾಲ ಸೌಲಭ್ಯ , ರಾಜ್ಯವ್ಯಾಪ್ತಿ ಪ್ರಯಾಣಿಸಲು ಉಚಿತ ಪಾಸ್ , 5 ಲಕ್ಷ ರೂ.ವಿಕಲಚೇತನರ ವಿವಾಹ ಪ್ರೋತ್ಸಾಹ ಧನ ನೀಡಬೇಕು. ಹಾಗೂ ವಿಕಲಚೇತನ ಕಲ್ಯಾಣಕ್ಕಾಗಿ ನಿಗಮ ಮಂಡಳಿಯನ್ನು ಸ್ಥಾಪಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು. ಚಂದ್ರಕಾಂತ ಪಾಟೀಲ,ಮಲ್ಲೇಶ ಭಜಂತ್ರಿ,ಮಿಲಿಂದ ಕುಮಾರ ಇದ್ದರು.
ಕನಿಷ್ಠ ವೇತನ ಜಾರಿಗೊಳಿಸಿ: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗೌರವ ಧನ ಕಾರ್ಯಕರ್ತರ ಸೇವೆ ಕಾಯಂ ಮಾಡುವಂತೆ ಒತ್ತಾಯಿಸಿ ವಿಕಲಚೇತನರ ಗೌರವ ಧನ ಕಾರ್ಯಕರ್ತರ ಸಂಘದಿಂದ ಪ್ರತಿಭಟನೆ ನಡೆಸಿದರು. ವಿಲಕಚೇತನರ ಹಾಗೂ ಹಿರಿಯ ನಾಗರಿಕರ ಹಿತ ಕಾಯುವಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ವಿವಿದ್ಧೋದೇಶ ಪುನರ್ವಸತಿ ಕಾರ್ಯಕರ್ತರ,ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹಾಗೂ ನಗರ ಕಾರ್ಯಕರ್ತರ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ಕೀರಗೌಡ ಪಾಟೀಲ,ಡಾ.ಅಂಬಾಜಿ ಮೇಟಿ,ದತ್ತಾತ್ರೇಯ ಕುಡಕಿ ಇದ್ದರು.
ನೇಕಾರರ ಬಾಕಿ ವಿದ್ಯುತ್ ಬಿಲ್ ಮನ್ನಾ ಮಾಡಿ: ನೇಕಾರರ ವಿದ್ಯುತ್ ಬಾಕಿ ಬಿಲ್ ಸಂಪೂರ್ಣ ಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ನೇಕಾರ ಸೇವಾ ಸಂಘ ಸದಸ್ಯರು ಆಗ್ರಹಿಸಿದರು. ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ 53 ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಗಳಿಗೆ 10 ಲಕ್ಷ ರೂ.ಪರಿಹಾರ ನೀಡಬೇಕು. ನೇಕಾರರ ರಾಷ್ಟ್ರೀಕೃತ ಮತ್ತು ಸಹಕಾರಿ ಸಂಘಗಳಲ್ಲಿರುವ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ನೇಕಾರರಿಗೂ ಗುರುತಿನ ಚೀಟಿ, 55 ವರ್ಷ ಮೇಲ್ಪಟ್ಟ ನೇಕಾರರಿಗೆ 5 ಸಾವಿರ ರೂ.ಮಾಸಾಶನ, ಜವಳಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯಬೇಕು ಎಂದು ಮನವಿ ಮೂಲಕ ಆಗ್ರಹಸಿದರು. ಶಿವಲಿಂಗ ಟರ್ಕಿ, ರಾಜೇಂದ್ರ ಮಿರ್ಜಿ, ಅರ್ಜುನ ಕುಂಬಾರ,ಬಬಣ ಮಾಳಿ, ಸಂಗಪ್ಪ ಉದಗಟ್ಟಿ, ರಾಜು ದಡ್ಡಿ ಇತರರಿದ್ದರು.
ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಸಿ: ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಉತ್ತರ ಕರ್ನಾಟಕ ಹೋರಾಟ ವೇದಿಕೆ ಮುಖಂಡರು ಆಗ್ರಹಿಸಿದರು. ಮಹದಾಯಿ ಕಳಸಾ ಬಂಡೂರಿ ಯೋಜನೆ ಶೀಘ್ರ ಜಾರಿ ಮಾಡಬೇಕು. ನಮ್ಮ ಊರು ನಮ್ಮ ದಾರಿ ಅನುಷ್ಠಾನ, ಗ್ರಾಮೀಣ ಪ್ರದೇಶದಲ್ಲಿ 24 ತಾಸು ವಿದ್ಯುತ್ ಪೂರೈಕೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಸೌಲಭ್ಯ, ಬೆಳೆಗಳ ಖರೀದಿ ಕೇಂದ್ರ ಸ್ಥಾಪಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು. ಎಸ್.ಎಮ್ ರೋಣ, ಭೀಮಪ್ಪ ಕಸಾಯಿ, ಲಕ್ಷ್ಮಣ ಬಕಾಯಿ ಇದ್ದರು.
ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳ್ಳಲಿ: ಮಹದಾಯಿ, ಎತ್ತಿನಹೊಳಿ ಸೇರಿದಂತೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳ ಕಾಮಗಾರಿ ಪೂರ್ಣಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಕೊಂಡಸಕೊಪ್ಪ ಬಳಿ ಬಹತ್ ಪ್ರತಿಭಟನೆ ನಡೆಸಿದರು. 2020ರ ಕಷಿ ಕಾಯ್ದೆ ರದ್ದುಗೊಳಿಸಬೇಕು, ಎಂಎಸ್‌ಪಿ ದರ ಶಾಸನ ಬದ್ಧವಾಗಿ ಜಾರಿ. ಕಬ್ಬಿಗೆ ಎಫ್‌ಆರ್‌ಪಿ ಜತೆಗೆ ಎಎಸ್‌ಪಿ ಮೂಲಕ ಕೊರತೆ ನೀಗಿಸುವುದು. ಸಕ್ಕರೆ ಇಳುವರಿಯನ್ನು ಕಾರ್ಖಾನೆ ವ್ಯಾಪ್ತಿಯಲ್ಲಿ ಸರ್ಕಾರ ಘೋಷಣೆ ಮಾಡಬೇಕು. ಬಗರಹುಕುಂ ಸಕ್ರಮಗೊಳಿಸಬೇಕು ಹಾಗೂ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.