ಕಬ್ಬು ಅರೆಯುವಿಕೆ ಪ್ರಾರಂಭಿಸಿ

07 CRP 01 (2)
Published on


ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ಕಬ್ಬು ಅರೆಯುವುದನ್ನು ಪ್ರಾರಂಭಿಸುವಂತೆ ಆಗ್ರಹಿಸಿ ತಾಲೂಕಿನ ಶ್ರೀನಿವಾಸಪುರ ಬಳಿಯಿರುವ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಮುಂದೆ ಸೋಮವಾರ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ತಾಲೂಕಿನ ಕಬ್ಬು ಬೆಳೆಗಾರರಿಗೆ ಪ್ರತಿ ವರ್ಷಕ್ಕೆ ಸುಮಾರು 30 ರಿಂದ 40 ಕೋಟಿ ರೂ. ನಷ್ಟ ವಾಗುತ್ತಿದೆ .ನವೀಕರಣದ ನೆಪಹೇಳಿಕೊಂಡು 13 ವರ್ಷಗಳಿಂದ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಳಿಸಿರುವುದರಿಂದ ಕಬ್ಬು ಬೆಳೆ ಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಬ್ಬು ಬೆಳೆಗಾರರ ಕಣ್ಣೊರೆಸುವ ಸಲುವಾಗಿ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡುವುದಾಗಿ ಹಲವು ಬಾರಿ ದಿನ ನಿಗದಿಪಡಿಸಿ ಮುಂದೂಡುತ್ತಲೇ ಬರುತ್ತಿದ್ದಾರೆ ಎಂದು ದೂರಿದರು.
ನಾವು ಪ್ರತಿಭಟನೆ ನಡೆಸುತ್ತೇವೆ ಎಂಬ ವಿಷಯ ತಿಳಿದು ಸೆ.14 ರಂದು ಬಾಯ್ಲರ್ ಬೆಂಕಿ ಹಾಕಲಾಗುವುದು. ಸೆ.30 ರಿಂದ ಕಬ್ಬು ಅರೆಯುವುದಾಗಿ ಆಡಳಿತ ಮಂಡಳಿ ಹೇಳಿಕೊಂಡಿದೆ. ಸೆ.30ರಿಂದ ಕಬ್ಬು ಅರೆಯುವ ಕಾರ್ಯ ಪ್ರಾರಂಭಿಸದಿದ್ದರೆ ಮರುದಿನವೇ ಚನ್ನರಾಯಪಟ್ಟಣದಿಂದ ಹಾಸನ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಲಾಗುವುದು. ಒಂದು ವಾರದ ನಂತರ ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಎಂ.ರಾಮಚಂದ್ರ, ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಮಾತನಾಡಿದರು. ಕಾರ್ಯಕರ್ತರು ಕಾರ್ಖಾನೆ ಬಳಿಯಿಂದ ಕಾಲ್ನಡಿಗೆ ಜಾಥಾ ಆರಂಭಿಸಿ ತಾಲೂಕು ಕಚೇರಿಗೆ ತಲುಪಿದರು. ನಂತರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾಅಮರನಾಥ್, ಜಿಲ್ಲಾ ಪಂಚಾಯಿತಿ ಸದಸ್ಯ ಶ್ರೇಯಸ್ ಪಟೇಲ್, ಮಾಜಿ ಉಪಾಧ್ಯಕ್ಷ ಎಚ್.ಎಸ್.ವಿಜಯಕುಮಾರ್, ಎಪಿಎಂಸಿ ನಿರ್ದೇಶಕ ಎಂ.ಶಂಕರ್, ಎಚ್‌ಎಸ್‌ಎಸ್‌ಎಸ್‌ಕೆ ನಿರ್ದೇಶಕ ರವೀಶ್, ಮಾಜಿ ನಿರ್ದೇಶಕ ಶಿವರಾಂ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ರತ್ನಮ್ಮ, ಮುಖಂಡರಾದ ಸಿ.ಎನ್.ಚಂದ್ರೇಗೌಡ, ಪ್ರಕಾಶ್‌ಗೌಡ, ಯುವರಾಜ್, ರಂಗೇಗೌಡ, ಎನ್.ಟಿ. ಬೊಮ್ಮೇಗೌಡ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net