

ರಾಯಚೂರು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ನ್ಯಾ. ನಾಗಮೋಹನ ದಾಸ್ ಆಯೋಗ ವರದಿ ಜಾರಿಗೆ ಆಗ್ರಹಿಸಿ ಆ.11 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ಮಾಡಲಾಗುತ್ತದೆಂದು ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಎಸ್.ಮಾರೆಪ್ಪ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ನ್ಯಾ.ನಾಗಮೋಹನದಾಸ ನೇತೃತ್ವ ದ ಆಯೋಗ ನೀಡಿರುವ ವರದಿಯನ್ನು ಸರ್ಕಾರ ಪಡೆದು ವಿಶೇಷ ಸಚಿವ ಸಂಪುಟದಲ್ಲಿ ಚರ್ಚಿಸುವದಾಗಿ ಹೇಳುತ್ತಿದೆ. ಸರ್ಕಾರ ವಿಳಂಬತೆಗೆ ಅವಕಾಶ ನೀಡದೇ ಅನುಮೋದನೆ ನೀಡಿ ಇದೇ ಅಧಿವೇಶನದಲ್ಲಿ ಅಂಗೀಕಾರ ಗೊಳಿಸಬೇಕು ಎಂದರು.
ಆಯೋಗ ವರದಿಗೆ ಛಲವಾದಿ ಸಮಾಜ ಆಕ್ಷೇಪ ವ್ಯಕ್ತಪಡಿಸಿ ದೂರು ನೀಡಿದೆ. ಆದರೆ ಆಯೋಗ ವರದಿಯಲ್ಲಿ ಆಕ್ಷೇಪಗಳು ಸರಿಪಡಿಸಿಕೊಳ್ಳಬಹುದೇ ಹೊರತು ಇಡಿ ಆಯೋಗವರದಿಯನ್ನೇ ತಿರಸ್ಕರಿಸಬೇಕೆನ್ನುವದು ಸರಿಯಾದುದ್ದಲ್ಲ. ಯಾವ ಆಯೋಗ ವರದಿಗಳು ಸಹ ನೂರಕ್ಕೆ ನೂರು ಸರಿ ಇರಲು ಸಾಧ್ಯವಾಗುವದಿಲ್ಲ. ಶೇ.6 ರಿಂದ 7 ರಷ್ಟು ವ್ಯತ್ಯಾಸಗಳಿರುವದು ಸಹಜ. ಪರಿಶೀಷ್ಟ ಜಾತಿಗಳಲ್ಲಿಯೇ 65 ಜಾತಿಗಳು ಅತ್ಯಂತ ಹಿಂದುಳಿದಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಶೈಕ್ಷಣಿಕವಾಗಿ 45 ಜಾತಿಗಳು ಶಿಕ್ಷಣ ಪಡೆದಿದರೆ ಮಾದಿಗ ಮತ್ತು ಅಲೆಮಾರಿ ಸಮೂದಾಯಗಳು ಶೇ.60ಕ್ಕಿಂತ ಕಡಿಮೆ ಶಿಕ್ಷಣ ಪಡೆದಿವೆ ಎಂದು ಆಯೋಗ ವರದಿ ಮಾಡಿದೆ. ಉದ್ಯೋಗದಲ್ಲಿಯೂ ಅನ್ಯಾಯವಾಗಿದೆ.
ಮೀಸಲಾತಿಯನ್ನು ಹೆಚ್ಚಾಗಿ ಪಡೆದ ಜಾತಿಗಳು ಸಹ ಸಾಮಾಜಿಕ ನ್ಯಾಯವನ್ನು ಅರ್ಥ ಮಾಡಿಕೊಳ್ಳಬೇಕು. ರಾಜ್ಯ ಮುಖ್ಯಮಂತ್ರಿಗಳು ರಾಜಕೀಯ ಪ್ರಭಾವವನ್ನು ಪರಿಗಣಿಸದೇ ತೆಲಂಗಾಣದ ಮುಖ್ಯಮಂತ್ರಿ ಕೈಗೊಂಡಿರುವ ನಿರ್ಧಾರವನ್ನು ರಾಜ್ಯದಲ್ಲಿಯೂ ಪ್ರದರ್ಶಿಸಬೇಕಿದೆ. ಆ.11 ರಿಂದ 22 ವರೆಗೆ ವಿಧಾನಮಂಡಲದ ಅಧಿವೇಶನ ನಡೆಯಲಿದೆ. ಸದನದಲ್ಲಿ ಮಂಡಿಸಿ ಅಂಗೀಕಾರಗೊಳಿಸದೇ ಹೋದರೆ ರಾಜ್ಯಾಧ್ಯಂತ ಹೋರಾಟ ಗಂಭೀರ ಸ್ವರೂಪ ಪಡೆಯುತ್ತದೆ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ಹೇಮರಾಜ ಅಸ್ಕಿಹಾಳ, ಆಂಜಿನೇಯ್ಯ ಉಟ್ಟೂರು, ನರಸಿಂಹಲು ಮರ್ಚಟ್ಟಾಳ, ಶ್ರೀನಿವಾಸ ಕೊಪ್ಪರ, ಆಂಜಿನೇಯ್ಯ ಕುರುಬದೊಡ್ಡಿ, ತಾಯಪ್ಪ ಗಧಾರ ಇದ್ದರು.