ಅತಿಥಿ ಉಪನ್ಯಾಸಕರ ಪ್ರತಿಭಟನೆ

16
Published on

ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು. ಲಾಕ್‌ಡೌನ್ ಅವಧಿಯ ಗೌರವಧನ ಬಿಡುಗಡೆ ಮಾಡಬೇಕು. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಉಪನ್ಯಾಸಕರನ್ನು ಮುಂದುವರಿಸಲು ಮುಖ್ಯಮಂತ್ರಿ ಮಧ್ಯಪ್ರವೇಶಿಸಬೇಕು. ಕೋವಿಡ್ ನಿಯಮ ಪಾಲಿಸುವ ಮೂಲಕ ಪ್ರತಿ ತರಗತಿಗೆ 40-50 ವಿದ್ಯಾರ್ಥಿಗಳು ಮೀರದಂತೆ ಕಾಲೇಜು ಪ್ರಾರಂಭಿಸಬೇಕು. ಪಿಎಫ್, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು. ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ, ಸಹಜ ಆರೋಗ್ಯ ಸಮಸ್ಯೆಯಿಂದ ಮೃತರಾದ ಕುಟುಂಬಗಳಿಗೆ ತಲಾ ಹತ್ತು ಲಕ್ಷ ರೂ. ಪರಿಹಾರ ಹಾಗೂ ಅನಾರೋಗ್ಯಪೀಡಿತರಾದ ಅತಿಥಿ ಉಪನ್ಯಾಸಕರಿಗೆ ತುರ್ತು ಚಿಕಿತ್ಸೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಜಿಲ್ಲಾಧ್ಯಕ್ಷ ಮಹದೇವಯ್ಯ, ಉಪಾಧ್ಯಕ್ಷರಾದ ಬಾಲಸುಬ್ರಹ್ಮಣ್ಯಂ, ನಾಗಾರ್ಜುನ್, ಡಾ.ಮಹೇಶ್, ಪ್ರಧಾನ ಕಾರ್ಯದರ್ಶಿ ಹನುಮಂತೇಶ್, ಸಂಘಟನಾ ಕಾರ್ಯದರ್ಶಿ ಡಾ.ಬಾಬು ಮಾಂಬಳ್ಳಿ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net