

ಮಂಡ್ಯ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ಕಾರ್ಪೊರೇಟ್ ಪರ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಪ್ರತಿಭಟನೆಗೆ ಸೀಮಿತವಾಯಿತು. ಹೆದ್ದಾರಿ ಸಂಚಾರ ನಡೆಸಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಕೆಲ ಗಂಟೆಗಳ ಬಳಿಕ ಬಿಡುಗಡೆ ಮಾಡಿದರು.
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಿಂದ ಜಯಚಾಮರಾಜೇಂದ್ರ ಒಡೆಯರ್ ವೃತ್ತದವರೆಗೆ ಮೆರವಣಿಗೆ ನಡೆಸಿ ಬಳಿಕ ಪ್ರತಿಭಟನೆ ನಡೆಸಿದ ಶ್ರಮಿಕ ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
8 ಗಂಟೆ ಕೆಲಸದ ಅವಧಿ, ಖಾಯಂ ಕೆಲಸ, 36 ಸಾವಿರ ಕನಿಷ್ಠ ವೇತನ ನಿಗದಿಪಡಿಸಬೇಕು. ಗುತ್ತಿಗೆ ಮುಂತಾದ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ತಕ್ಷಣ ಜಾರಿ ಮಾಡಬೇಕು. ಕಟ್ಟಡ ಕಾರ್ಮಿಕರು, ಆಟೋ-ಟ್ಯಾಕ್ಸಿ ಚಾಲಕರು, ಮನೆ ಕೆಲಸಗಾರರು. ಬಸ್ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಟೈಲರ್‌ಗಳು, ಛಾಯಾಚಿತ್ರಗಾಹಕರು, ಮೆಕಾನಿಕ್, ಬೀಡಿ ಅಗರಬತ್ತಿ ಕಾರ್ಮಿಕರು, ಮೀನುಗಾರರು, ಇನ್ನಿತರೆ ಎಲ್ಲ ಅಸಂಘಟಿತ ಕಾರ್ಮಿಕರು ಮತ್ತು ಕೃಷಿ, ತೋಟ ಕಾರ್ಮಿಕರು ಸೇರಿದಂತೆ ಎಲ್ಲ ವಿಭಾಗದ ಕಾರ್ಮಿಕರಿಗೆ ಕನಿಷ್ಟ ಮಾಸಿಕ 9 ಸಾವಿರ ರೂ ಪಿಂಚಣಿ ಹಾಗೂ ಸಾಮಾಜಿಕ ಭದ್ರತೆಯನ್ನು ಖಾತ್ರಿಪಡಿಸಬೇಕು ಎಂದು ಒತ್ತಾಯಿಸಿದರು.
ಎನ್‌ಪಿಎಸ್ ಮತ್ತು ಯುಪಿಎಸ್ ರದ್ದುಪಡಿಸಿ, ಹಳೆಯ ಪಿಂಚಣಿಯನ್ನು ಮರುಸ್ಥಾಪಿಸಬೇಕು. ಇಎಸ್‌ಐ, ಪಿ.ಎಫ್. ಬೋನಸ್ ಪಾವತಿಗಿರುವ ಎಲ್ಲ ವೇತನ ಮಿತಿಯನ್ನು ತೆಗೆಯಬೇಕು. ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಆಹಾರ, ಔಷಧ, ಕೃಷಿ ಸಾಮಗ್ರಿ ಮುಂತಾದ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ತೆಗೆಯಬೇಕು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮೇಲಿನ ಕೇಂದ್ರೀಯ ಅಬಕಾರಿ ಸುಂಕ ಇಳಿಸಬೇಕೆಂದು ಒತ್ತಾಯಿಸಿದರು.
ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರೀಕರಣಗೊಳಿಸಿ ಆಹಾರ ಭದ್ರತೆಯನ್ನು ಖಾತ್ರಿಪಡಿಸಬೇಕು. ಸಾರ್ವಜನಿಕ ಉದ್ದಿಮೆ, ನಿಗಮ ಮತ್ತು ಇಲಾಖೆಗಳನ್ನು ಖಾಸಗೀಕರಿಸುವ ‘ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ ಯೋಜನೆ’ಯನ್ನು ರದ್ದುಪಡಿಸಬೇಕು. ಎಲ್ಲರಿಗೂ ಉಚಿತ ಶಿಕ್ಷಣದ ಹಕ್ಕು, ಆರೋಗ್ಯದ ಹಕ್ಕು, ವಸತಿ ಖಾತ್ರಿಪಡಿಸಬೇಕು. ದೇಶದ ಆತಿ ದೊಡ್ಡ ಶ್ರೀಮಂತರ ಆಸ್ತಿ ಮೇಲೆ ಸಂಪತ್ತು ತೆರಿಗೆ ವಿಧಿಸಬೇಕು. ಕಾರ್ಪೊರೇಟ್ ತೆರಿಗೆಯನ್ನು ಹೆಚ್ಚಿಸಿ ಸಂಪನ್ಮೂಲ ಕ್ರೋಢೀಕರಣ ಮಾಡಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ಬೆಂಗಳೂರು-ಮೈಸೂರು ಹೆದ್ದಾರಿಗಿಳಿದು ರಸ್ತೆ ತಡೆ ನಡೆಸಲು ಮುಂದಾದಾಗ ಪೊಲೀಸರು ಎಚ್ಚೆತ್ತು ಪ್ರತಿಭಟನಾಕಾರರನ್ನು ಬಂಧಿಸಿ ಎರಡು ಬಸ್‌ಗಳ ಮೂಲಕ ಪೊಲೀಸ್ ಪೆರೇಡ್ ಮೈದಾನಕ್ಕೆ ಕರೆದೊಯ್ದರು.
ಪ್ರತಿಭಟನೆಯಲ್ಲಿ ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆ ಅಧ್ಯಕ್ಷ ವರದರಾಜೇಂದ್ರ, ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಪೂರ್ಣಿಮ, ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ಮಹಿಳಾ ಮುನ್ನಡೆಯ ಶಿಲ್ಪಾ, ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕಾರ್ಮಿಕ ಒಕ್ಕೂಟದ ಮುಖಂಡರಾದ ಕೃಷ್ಣಪ್ಪ, ಪುಟ್ಟಸ್ವಾಮಿ, ನರಸಿಂಹ, ಸಿಪಿಐಎಂನ ಪುಟ್ಟಮಾದು, ಸಿ.ಕುಮಾರಿ ಇತರರಿದ್ದರು.