

ಯಲ್ಲಾಪುರ: ರೈತರ, ಮಠ-ಮಂದಿರಗಳ ಆಸ್ತಿಗಳನ್ನು ವಕ್ಪ್ ಸ್ವತ್ತೆಂದು ಪಹಣಿಯಲ್ಲಿ ದಾಖಲಿಸಿರುವ ಕ್ರಮ ಖಂಡಿಸಿ ಬಿಜೆಪಿ ನೇತೃತ್ವದಲ್ಲಿ ವಿವಿಧ ಹಿಂದು ಸಂಘಟನೆಗಳ ಪ್ರಮುಖರು ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ತಹಸೀಲ್ದಾರ್ ಯಲ್ಲಪ್ಪ ಗೊನ್ನೆಣ್ಣವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾ ಸಭೆಯಲ್ಲಿ ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಅಲ್ಪ ಸಂಖ್ಯಾತರ ತುಷ್ಟೀಕರಣಕ್ಕೆ ಸಿದ್ದರಾಮಯ್ಯ ಟೊಂಕ ಕಟ್ಟಿ ನಿಂತಿದ್ದಾರೆ. ಈ ಕಾಂಗ್ರೆಸ್ ಸರ್ಕಾರದ ಬಳಿ ಒಳ್ಳೆಯ ಕೆಲಸ ಮಾಡಲು ಸಮಯ ಇಲ್ಲ, ಹಣಕಾಸೂ ಇಲ್ಲ. ಕರ್ನಾಟಕವನ್ನು ಇನ್ನೊಂದು ಪಾಕಿಸ್ತಾನ ಮಾಡಲು ಹೊರಟಿದ್ದಾರೆ. ಮುಖ್ಯಮಂತ್ರಿಗಳು ನೋಟಿಸ್ ಹಿಂಪಡೆಯುವಂತೆ ಮೌಖಿಕ ಸೂಚನೆ ಕೊಟ್ಟರೆ ಸಾಲದು. ಸರ್ಕಾರದ ಗೆಜೆಟ್ ನೋಟಿಫಿಕೇಶನ್ ಅನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ, ಬಿಜೆಪಿ ಮುಖಂಡರಾದ ವೆಂಕಟ್ರಮಣ ಬೆಳ್ಳಿ, ಗೋಪಾಲಕೃಷ್ಣ ಗಾಂವ್ಕಾರ, ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ನಟರಾಜ ಗೌಡರ, ಕೆ.ಟಿ. ಹೆಗಡೆ, ರಾಮು ನಾಯ್ಕ, ರವಿ ಕೈಟಕರ್, ರಾಮಚಂದ್ರ ಚಿಕ್ಯಾನಮನೆ, ವಿ.ಎನ್. ಭಟ್ಟ ನಡಿಗೆಮನೆ, ವಿಹಿಂಪ ತಾಲೂಕಾಧ್ಯಕ್ಷ ಗಜಾನನ ನಾಯ್ಕ ತಳ್ಳಿಕೇರಿ, ಅನಂತ ಕಂಚಿಪಾಲ್, ಇತರರಿದ್ದರು.