ಮರ ಕಟಾವು ಮಾಡಿದ್ದಕ್ಕೆ ಆಕ್ರೋಶ: ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ

Protests by progressive organisations Mandya
Published on

ಮಂಡ್ಯ: ನಗರದ ಹೊರವಲಯದಲ್ಲಿ ನಿರ್ಮಾಣವಾಗಿರುವ ‘ಡಿ ಮಾರ್ಟ್’ ಮಳಿಗೆಗಾಗಿ ಕಾನೂನುಬಾಹಿರವಾಗಿ ಮರಗಳನ್ನು ಕಟಾವು ಮಾಡಿರುವುದನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಮುಖಂಡರು ಅರಣ್ಯ ಇಲಾಖೆ ಎದುರು ಪ್ರತಿಭಟನೆ ನಡೆಸಿದರು.

ಅರಣ್ಯ ಇಲಾಖೆಯ ಅಧಿಕಾರಿಗಳು ಟಿಂಬರ್ ದಂಧೆಕೋರರೊಂದಿಗೆ ಶಾಮೀಲಾಗಿ ಸಾರ್ವಜನಿಕ ಸ್ಥಳಗಳಲ್ಲಿರುವ ಭಾರೀ ಗಾತ್ರದ ಮರಗಳನ್ನು ಕಡಿಸುತ್ತಿದ್ದು, ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿದರು. ಕೆಲ ದಿನಗಳ ಹಿಂದೆ ಮಂಡ್ಯದ ನೂರಡಿ (ಅಂಬೇಡ್ಕರ್ ರಸ್ತೆ) ರಸ್ತೆಯಲ್ಲಿ ಮರಗಳ ಅನಗತ್ಯ ಕೊಂಬೆಗಳನ್ನು ಕಡಿಯುವ ಬದಲು ಮರಗಳು ಚಿಗುರದಂತೆ ಸಂಪೂರ್ಣವಾಗಿ ನೆಲಕ್ಕುರುಳಿಸಲಾಗಿತ್ತು. ಇದು ಅಲ್ಲಿನ ಖಾಸಗಿ ವಾಣಿಜ್ಯ ಮಳಿಗೆಗಳ ಅನುಕೂಲಕ್ಕಾಗಿ ಅರಣ್ಯ ಇಲಾಖೆ ಮಾಡಿದ ಕೆಲಸ ಎಂದು ದೂರಿದರು.

ಮಂಡ್ಯ ನಗರದ ಸಿಟಿ ಕ್ಲಬ್ ಎದುರಿನ ಭಾರೀ ಗಾತ್ರದ ಮರವನ್ನು ಕಡಿದುರಿಳಿಸಲಾಯಿತು. ಈ ಮರ ಸರ್ಕಾರಿ ಸ್ಥಳದಲ್ಲಿದ್ದರೂ ಸಿಟಿಕ್ಲಬ್‌ನವರಿಗೆ ಅನುಕೂಲ ಕಲ್ಪಿಸಲು ಮರವನ್ನು ಕಡಿಸಲಾಯಿತು. ಈಗ ನಗರದ ಹೊರವಲಯದ ಹೆಬ್ಬಳ್ಳದ ಬಳಿಯಿರುವ ಬೆಂಗಳೂರು-ಮೈಸೂರು ಹೆದ್ದಾರಿಗೆ ಹೊಂದಿಕೊಂಡ ಸರ್ಕಾರಿ ಸ್ಥಳದಲ್ಲಿ ದ್ದ ಭಾರೀ ಗಾತ್ರದ ಆರು ಮರಗಳನ್ನು ಕಡಿದುರುಳಿಸಲು ಅರಣ್ಯ ಇಲಾಖೆಯೇ ನೇತೃತ್ವ ವಹಿಸಿರುವುದು ಖಂಡನೀಯ ಎಂದರು.

ಈ ಸಾಲು ಮರಗಳು ಸಾರ್ವಜನಿಕರಿಗೆ ನೆರಳನ್ನು ನೀಡುವ ಜತೆಗೆ ಸಾಕಷ್ಟು ಆಮ್ಲಜನಕ ಪೂರೈಕೆಯಲ್ಲೂ ಕೊಡುಗೆ ನೀಡುತ್ತಿವೆ. ಈ ಮರಗಳಿಂದ ಯಾವುದೇ ಅನಾನುಕೂಲ ಇಲ್ಲದಿದ್ದರೂ ‘ಡಿ ಮಾರ್ಟ್’ ಎಂಬ ಖಾಸಗಿ ಕಂಪನಿಯ ಕಟ್ಟಡದ ಕಾರಣಕ್ಕಾಗಿ ಮರಗಳ ಮಾಫಿಯಾದ ಜತೆ ಶಾಮೀಲಾಗಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ರಕ್ಷಣೆಯ ಬದಲು ಅರಣ್ಯ ನಾಶದ ಗುರಿ ಹೊಂದಿದ್ದಾರೆ. ಆದ್ದರಿಂದ ಈ ಪ್ರಕರಣದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕು, ಮರ ಕಡಿತದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರುನಾಡ ಸೇವಕರು ಸಂಘಟನೆಯ ಎಂ.ವಿ.ನಾಗಣ್ಣಗೌಡ, ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಅಂಬೇಡ್ಕರ್ ವಾರಿಯರ್ಸ್ ಗಂಗರಾಜು, ನರಸಿಂಹಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net