

ಮುಂಡಗೋಡ: ನಮ್ಮ ಮುಂದಿನ ಪೀಳಿಗೆಗಾಗಿ ಘಟ್ಟದ ಮೇಲಿನ ತಾಲೂಕಿನವರಿಗೆ ಪ್ರತ್ಯೇಕ ಜಿಲ್ಲೆಯಾಗಬೇಕು. ಈ ಹೋರಾಟಕ್ಕೆ ಜಾತಿ ಭೇದವಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ಮಾಡುತ್ತೇವೆ. ಸರ್ಕಾರ ನಮ್ಮ ಈ ಸಮಸ್ಯೆಯನ್ನು ಈಡೇರಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ಕದಂಬ ಕನ್ನಡ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಎಚ್ಚರಿಕೆ ನೀಡಿದರು.
ಸ್ಥಳೀಯ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಕದಂಬ ಕನ್ನಡ ಜಿಲ್ಲೆಗಾಗಿ ಜನಜಾಗೃತಿ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು. ಈ ಹೋರಾಟ ಶಿರಸಿಯಿಂದ ಆರಂಭಗೊಂಡಿದೆ. ಮುಂಡಗೋಡ ತಾಲೂಕಿನಲ್ಲಿ ಇದು ಮೊದಲ ಸಭೆಯಾಗಿದೆ. ಈ ತಾಲೂಕಿನಿಂದ 150 ಕಿ.ಮೀ ಜಿಲ್ಲಾ ಕೇಂದ್ರವಾದ ಕಾರವಾರಕ್ಕೆ ಹೋಗಬೇಕು. ಅಧಿಕಾರಿಗಳು ಕುಂಟುನೆಪ ಹೇಳಿ ಕೆಲಸವಾಗದಿದ್ದರೆ ಮತ್ತೇ ಮರುದಿನ ಕಾರವಾರಕ್ಕೆ ಹೋಗಬೇಕು. ಇದರಿಂದ ಎರಡು ದಿನ ವ್ಯತ್ಯಯವಾಗುತ್ತದೆ. ರಾಮನಗರ ಜಿಲ್ಲೆ ಮೂರು ತಾಲೂಕು ಒಳಗೊಂಡ ಜಿಲ್ಲೆಯಾಗಿದೆ. ವಿಜಯನಗರ ಜಿಲ್ಲೆ ಒಂದು ತಿಂಗಳಿನಲ್ಲಿಯೇ ಜಿಲ್ಲೆ ಮಾಡುತ್ತಾರೆ. ನಾವು ಹಲವು ವರ್ಷಗಳಿಂದ ಜಿಲ್ಲೆಗಾಗಿ ಹೋರಾಟ ಮಾಡುತ್ತಿದ್ದೇವೆ. ಕಾಗೇರಿ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಶೈಕ್ಷಣಿಕ ಜಿಲ್ಲೆಯನ್ನಾಗಿ ಮಾಡಿದ್ದಾರೆ. ನಾವು ಜಿಲ್ಲೆಗಾಗಿ ಕಂದಾಯ ಸ್ಥಾನಮಾನಕ್ಕೆ ಹೋರಾಟ ಮಾಡಬೇಕಿದೆ. ನಾವು ಗಟ್ಟಿಯಾಗಿ ನಿಂತು ಹೋರಾಟ ಮಾಡಿದರೆ ಒಂದು ತಿಂಗಳೊಳಗೆ ಜಿಲ್ಲೆಯಾಗುತ್ತದೆ. ಈ ತಾಲೂಕಿನ ಜನತೆ ಹೋರಾಟಕ್ಕೆ ಎತ್ತಿದ್ದ ಕೈ. ಇಲ್ಲಿ ಜಾತಿ, ಭೇದ ಇಲ್ಲದೆ ಹೋರಾಟ ಮಾಡುವ ತಾಕತ್ತು ಇದೆ. ಈ ಹೋರಾಟಕ್ಕೂ ಯಾವುದೇ ರಾಜಕೀಯ ಪಕ್ಷಕ್ಕೂ ಸಂಬಂಧವಿಲ್ಲ. ಮುಂದಿನ ಬೆಳಗಾವಿ ಅಧಿವೇಶನ ನಡೆಯುವ ಹೋರಾಟಕ್ಕೆ ನೀವೆಲ್ಲರೂ ಬೆಂಬಲ ನೀಡಬೇಕು ಎಂದರು.
ನಂತರ ಚಿದಾನಂದ ಹರಿಜನ ಮಾತನಾಡಿ, ಜಿಲ್ಲೆಯಾಗಬೇಕಾದರೆ ಎಲ್ಲ ತಾಲೂಕುಗಳ ಜನರು ಹೊರಟಕ್ಕೆ ಕೈಜೋಡಿಸಬೇಕು. ಮುಂದಿನ ಪೀಳಿಗೆಗಾಗಿ ಶಿರಸಿ ಜಿಲ್ಲೆಯಾಗಬೇಕು. ಪ್ರತಿ ಮನೆಯಿಂದ ಒಬ್ಬರು ಪ್ರತಿಭಟನೆಗೆ ಬರಬೇಕು. ಮುಂದಿನ ಅಧಿವೇಶನದಲ್ಲಿ ಜಿಲ್ಲೆ ಘೊಷಣೆ ಆಗಬೇಕು. ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ಮತದಾನಕ್ಕೆ ಬಹಿಷ್ಕಾರ ಹಾಕುತ್ತೇವೆ ಎಂದು ಎಚ್ಚರಿಸಿದರು.
ಮಂಜುನಾಥ ಪಾಟೀಲ, ಗುಡ್ಡಪ್ಪ ಕಾತೂರ, ಎಂ.ಎನ್. ಭಟ್, ಜಿ.ಎಸ್. ಹೆಗಡೆ, ಸದಾನಂದ ದೇಶಳ್ಳಿ, ಹನಮಂತ ಆರೇಗೊಪ್ಪ, ಅಶೋಕ ಚಲವಾದಿ, ಬಸವರಾಜ ಓಶಿಮಠ, ಸಲಂ ಕಿರಣ ಶೇರಖಾನಿ, ಬಸವರಾಜ ಸಂಗಮೇಶ್ವರ, ಬಸವರಾಜ ಪಾಟೀಲ, ಆರ್.ಜೆ. ಬೆಳ್ಳನವರ, ಎಸ್ .ಬಿ. ಹೂಗಾರ, ಹುಲಗಪ್ಪ ಭೋವಿವಡ್ಡರ, ಅಲ್ಲಿಖಾನ್ ಪಠಾಣ, ಇತರರಿದ್ದರು.