

ಕಾರ್ಕಳ: ತಾಲೂಕಿನ ಪ್ರವಾಸೋದ್ಯಮವನ್ನು ಕಾಂಗ್ರೆಸ್ ಸರ್ಕಾರ ವಿಕಾರಗೊಳಿಸುವ ಕೆಲಸ ಮಾಡಿದೆ. ರಾಜಕೀಯ ಲಾಭಕ್ಕಾಗಿ ಥೀಮ್ ಪಾರ್ಕ್ ಅರ್ಧಕ್ಕೆ ನಿಲ್ಲುವಂತಾಗಿದೆ. ಥೀಮ್ ಪಾರ್ಕ್ ವಿವಾದದಿಂದ ತಾಲೂಕಿನ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ ಆರೋಪಿಸಿದರು.
ಬೈಲೂರು ಬಸ್ ನಿಲ್ದಾಣದಲ್ಲಿ ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ನಿಲುವಿನ ವಿರುದ್ಧ ಬಿಜೆಪಿ ಯುವ ಮೋರ್ಚಾ ಕಾರ್ಕಳ ವತಿಯಿಂದ ಗುರುವಾರ ಆಯೋಜಿಸಲಾದ ಪ್ರತಿಭಟನೆಯಲ್ಲಿ ಮಾತನಾಡಿದರು.
ಬಿಜೆಪಿ ಹಿರಿಯ ಮುಖಂಡ ಮಣಿರಾಜ ಶೆಟ್ಟಿ ಮಾತನಾಡಿ, ನೇರವಾಗಿ ಚುನಾವಣೆ ಗೆಲ್ಲಲು ಸಾಧ್ಯವಾಗದೆ, ಅಭಿವೃದ್ಧಿಯನ್ನು ಸಹಿಸಲಾಗದೆ ಕಾಂಗ್ರೆಸ್ ನೀಚ ರಾಜಕೀಯ ಮಾಡುತ್ತಿರುವುದು ವಿಷಾದನೀಯ ಎಂದರು.
ಬಿಜೆಪಿ ಪಕ್ಷದ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಜಿಪಂ ಮಾಜಿ ಸದಸ್ಯ ಸುಮಿತ್ ಶೆಟ್ಟಿ, ಬಿಜೆಪಿ ಪ್ರಮುಖರಾದ ಉದಯ್ ಎಸ್.ಕೋಟ್ಯಾನ್, ಜಯರಾಂ ಸಾಲ್ಯಾನ್, ಮುಟ್ಲುಪಾಡಿ ಸತೀಶ್ ಶೆಟ್ಟಿ, ಹಿಂದು ಮುಖಂಡ ಮಹೇಶ್ ಶೆಣೈ, ಹರೀಶ್ ನಾಯಕ್, ಗುರು ಪ್ರಸಾದ್ ರಾವ್, ಸುಧೀರ್ ಹೆಗ್ಡೆ, ರಾಕೇಶ್ ಶೆಟ್ಟಿ, ಮುಟ್ಲುಪಾಡಿ ಸುಹಾಸ್ ಶೆಟ್ಟಿ, ವಿನಯ ಡಿ.ಬಂಗೇರ, ಮಾಲಿನಿ ಜೆ.ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.