ರಾಜ್ಯ ಸರ್ಕಾರದ ವಿರುದ್ಧ ಕರವೇ ಪ್ರತಿಭಟನೆ

25HSN2
Published on

ಹಾಸನ: ಬಿಜೆಪಿ ಸರ್ಕಾರ ಅಭಿವೃದ್ಧಿ ಕಾಮಗಾರಿಗೆ ತಡೆಯೊಡ್ಡುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಾವಿರಾರು ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಆದರೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ಎಲ್ಲದಕ್ಕೂ ತಡೆ ನೀಡಿದ್ದಾರೆ. ನೀರಾವರಿ, ಸರ್ಕಾರಿ ಕಟ್ಟಡ ಸೇರಿ ವಿವಿಧ ಕೆಲಸಗಳು ಸ್ಥಗಿತಗೊಂಡಿದ್ದು, ಅಕ್ಕ ಪಕ್ಕದ ಜಿಲ್ಲೆಗೆ ಹೋಲಿಸಿದರೆ ಹಾಸನ ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎಂದು ಆರೋಪಿಸಿದರು.

ಹಾಸನದ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಅನುಮೋದನೆ ಪಡೆದಿದ್ದರು. ಜತೆಗೆ ಅರಕಲಗೂಡು, ಅರಸೀಕೆರೆಯಲ್ಲಿ ಇಂಜಿನಿಯರಿಂಗ್ ಕಾಲೇಜು ತೆರೆಯಲು ಸಂಪುಟದ ಅನುಮತಿ ಪಡೆದಿದ್ದರು. ಆದರೆ ಬಿಜೆಪಿ ಸರ್ಕಾರ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಕಾಲೇಜುಗಳನ್ನು ಮುಚ್ಚಲು ಸಜ್ಜಾಗಿದೆ. ಈ ರೀತಿಯ ದ್ವೇಷ ರಾಜಕಾರಣ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಐದಾರು ದಶಕಗಳಿಂದ ಪ್ರಯತ್ನಿಸುತ್ತಿದ್ದರೂ ಫಲಪ್ರದವಾಗುತ್ತಿಲ್ಲ. ಈ ಉದ್ದೇಶಕ್ಕಾಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಾಸನ ಜಿಲ್ಲೆಯನ್ನು ಈ ವಿಚಾರದಲ್ಲಿ ಸಂಪೂರ್ಣ ಕಡೆಗಣಿಸಿದೆ ಎಂದರು.

ಮಲೆನಾಡು ಭಾಗದಲ್ಲಿ ಹೆಚ್ಚಿರುವ ಕಾಡಾನೆ ಹಾವಳಿ ಸಮಸ್ಯೆಗೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು. ಏಲಕ್ಕಿ, ಕಾಫಿಗೆ ಬೆಂಬಲ ಬೆಲೆ ಘೋಷಿಸಬೇಕು. ಆಲೂಗಡ್ಡೆ ಬೆಳೆಗಾರರಿಗೆ ಪ್ರೋತ್ಸಾಹ ಧನ ಹೆಚ್ಚಿಸಬೇಕು. ಶಾಲಾ ಕಟ್ಟಡ ದುರಸ್ತಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ರಸ್ತೆ ಕಾಮಗಾರಿಗೆ ಆದ್ಯತೆ ನೀಡಬೇಕು. ಬಿಜೆಪಿ ಸರ್ಕಾರ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡದೆ ಪಕ್ಷ ಭೇದ ಮರೆತು ಸೌಜನ್ಯದಿಂದ ವರ್ತಿಸದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಆರ್.ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು. ಕರವೇ (ನಾರಾಯಣ ಗೌಡ ಬಣ) ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್, ಸೀತಾರಾಂ, ಅಭಿ, ಪ್ರೀತು, ರೇಖಾ, ಸರೋಜಮ್ಮ, ಪದ್ಮಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net