ನಾಗಮಂಗಲ: ಕಾಂಗ್ರೆಸ್ ಮುಖಂಡರು ನಡೆಸಿದ ಪಿತೂರಿಯಿಂದ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಪೆನ್‌ಡ್ರೈವ್ ಪ್ರಕರಣದ ಸಂತ್ರಸ್ತೆಯರು ಆತ್ಮಹತ್ಯೆಗೆ ಯತ್ನಿಸುವ ಹಂತಕ್ಕೆ ಬಂದಿದ್ದಾರೆ ಎಂದು ಮಾಜಿ ಶಾಸಕ ಸುರೇಶ್‌ಗೌಡ ಗಂಭೀರ ಆರೋಪ ಮಾಡಿದರು.
ಪೆನ್‌ಡ್ರೈವ್ ಹಂಚಿಕೆ ಪ್ರಕರಣದ ಪ್ರಮುಖರಾದ ಡಿ.ಕೆ.ಶಿವಕುಮಾರ್ ಮತ್ತು ಎಲ್.ಆರ್.ಶಿವರಾಮೇಗೌಡರ ಬಂಧನಕ್ಕೆ ಆಗ್ರಹಿಸಿ ಪಟ್ಟಣದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಬುಧವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯ ನೇತೃತ್ವವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಷಡ್ಯಂತ್ರದಿಂದ ಸಂತ್ರಸ್ತೆಯರ ಕುಟುಂಬ ಬೀದಿಗೆ ಬಂದಿದೆ. ಕೆಲವರು ವಿಚ್ಛೇದನದಂತಹ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಎಲ್ಲಾ ಘಟನೆಗಳಿಗೂ ಕಾಂಗ್ರೆಸ್ ಸರ್ಕಾರವೇ ಕಾರಣವಾಗಿದ್ದರೂ ಹಲವು ಸಂಗತಿಗಳನ್ನು ಮುಚ್ಚಿಡುವ ಯತ್ನ ಮಾಡುತ್ತಿದೆ ಎಂದು ಸುರೇಶ್‌ಗೌಡ ದೂರಿದರು.
ಸಮರ್ಥಿಸಿಕೊಳ್ಳುವುದಿಲ್ಲ:
ತಪ್ಪು ಮಾಡಿದವರನ್ನು ನಮ್ಮ ಪಕ್ಷ ಇದುವರೆಗೂ ಸಮರ್ಥಿಸಿಕೊಂಡಿಲ್ಲ. ಈಗಿನ ಆರೋಪದಲ್ಲಿ ಪ್ರಜ್ವಲ್‌ರೇವಣ್ಣ ತಪ್ಪು ಮಾಡಿರುವುದು ಸಾಬೀತಾದರೆ ಅವರನ್ನು ಗಲ್ಲಿಗೇರಿಸಲಿ. ಅದಕ್ಕೆ ನಮ್ಮ ಪಕ್ಷದ ಯಾರೊಬ್ಬರ ತಕರಾರೂ ಇಲ್ಲ.
ಆದರೆ ಈ ಪ್ರಕರಣದಲ್ಲಿ ಅದಕ್ಕಿಂತ ದೊಡ್ಡಮಟ್ಟದ ಕೃತ್ಯ ಎಂದರೆ ಸಂತ್ರಸ್ತ ಮಹಿಳೆಯರ ಮುಖ ಕಾಣುವಂತಿರುವ ವಿಡಿಯೋ ಹಂಚಿಕೆ ಮಾಡಿರುವುದಾಗಿದೆ. ಈ ಮೂಲಕ ಮಹಿಳೆಯರ ಕುಟುಂಬಗಳು ಹಾಗೂ ಅವರ ಜೀವನ ಬೀದಿಗೆ ಬರಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಈ ಕೃತ್ಯಕ್ಕೆ ಮಧ್ಯವರ್ತಿಯಾಗಿರುವ ಎಲ್.ಆರ್.ಶಿವರಾಮೇಗೌಡ ನೇರ ಕಾರಣರಾಗಿದ್ದಾರೆ ಎಂದು ಸುರೇಶ್‌ಗೌಡ ದೂರಿದರು.