

ಬ್ಯಾಡಗಿ: ತಾಲೂಕಿನ ಕದರಮಂಡಲಗಿ ಗ್ರಾಮದ ಹೊರಭಾಗದ ಬ್ಯಾಡಗಿ-ರಾಣೆಬೆನ್ನೂರ ರಸ್ತೆಯಲ್ಲಿ ಸಿ.ಡಿ. ಹಾಗೂ ಕಾಲುವೆ ನಿರ್ವಿುಸದ ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ ಖಂಡಿಸಿ ಗ್ರಾಮಸ್ಥರು ಶನಿವಾರ ಸುಮಾರು ನಾಲ್ಕೈದು ತಾಸು ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಕಾಂತೇಶ ನಾಯ್ಕರ ಮಾತನಾಡಿ, ಗ್ರಾಮದ ಗುಡ್ಡಗಳಿಂದ ರಭಸವಾಗಿ ಹರಿದು ಬಂದು ರಾಜಕಾಲುವೆ ಮೂಲಕ ಹಳ್ಳ ಸೇರಬೇಕು. ಆದರೆ, ಕಾಲುವೆ, ಸಿ.ಡಿ. ಇಲ್ಲದ ಪರಿಣಾಮ ಜೋರಾಗಿ ಮಳೆ ಬಂದಾಗ ನೀರು ರಸ್ತೆ ಮೂಲಕ ಸುತ್ತಲಿನ ಮನೆಗಳಿಗೆ ನುಗ್ಗುವ ಜತೆಗೆ ರಸ್ತೆಗಳನ್ನು ಹಾಳು ಮಾಡುತ್ತಿದೆ. ಈ ಕುರಿತು ಲೋಕೋಪಯೋಗಿ ಇಲಾಖೆ ಇಂಜಿನಿಯರ್ಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಎಲ್ಲ ಅಧಿಕಾರಿಗಳಿಗೆ ಮನವಿ ಮಾಡಿ ಸಾಕಾಗಿದೆ. ಜಿಲ್ಲಾಧಿಕಾರಿ ಹಾಗೂ ಶಾಸಕರು ಆಗಮಿಸಿ, ನ್ಯಾಯ ಒದಗಿಸುವರೆಗೂ ರಸ್ತೆ ತಡೆ ಕೈಬಿಡುವುದಿಲ್ಲ ಎಂದರು.
ಶಾಸಕರಿಂದ ಭರವಸೆ: ಶಾಸಕ ಬಸವರಾಜ ಶಿವಣ್ಣನವರ ಗ್ರಾಮದ ಮುಖಂಡರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಗ್ರಾಮದ ರಸ್ತೆ ಸೇರಿದಂತೆ ಐದಾರು ರಸ್ತೆ ಕಾಮಗಾರಿಗಳ ಪ್ರಸ್ತಾವನೆಯನ್ನು ಮುಖ್ಯಮಂತ್ರಿ, ಲೋಕೋಪಯೋಗಿ ಸಚಿವರಿಗೆ ಸಲ್ಲಿಸಿದ್ದೇನೆ. ಎರಡ್ಮೂರು ತಿಂಗಳಲ್ಲಿ ಮಂಜೂರಾಗಲಿವೆ. ರಾಜ್ಯದ ಮೂಲೆಮೂಲೆಗಳಿಂದಲೂ ಲಕ್ಷಾಂತರ ಭಕ್ತರು ಆಂಜನೇಯ ಕ್ಷೇತ್ರಕ್ಕೆ ಬಂದು-ಹೋಗುತ್ತಾರೆ. ಇಲ್ಲಿನ ರಸ್ತೆ ಕಾಮಗಾರಿಗೆ ವಿಶೇಷ ಒತ್ತು ನೀಡುವೆ ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ತರು ಪ್ರತಿಭಟನೆ ವಾಪಸ್ ಪಡೆದರು.
ಮರ ತೆರವು: ಹಲವು ದಿನಗಳಿಂದ ವಿದ್ಯುತ್ ತಂತಿ ಹಾಗೂ ರಸ್ತೆಗೆ ಹೊಂದಿಕೊಂಡಿದ್ದ ಮರವೊಂದು ಮಳೆಗೆ ಬೀಳುವಂತಾಗಿತ್ತು. ಅಲ್ಲದೆ, ರಸ್ತೆ, ಕಾಲುವೆ ನಿರ್ವಿುಸಲು ಬಾರದಂತಾಗಿತ್ತು. ಬಾಗಿ ನಿಂತಿದ್ದ ಮರವನ್ನು ಗ್ರಾಮಸ್ಥರು ನೆಲಕ್ಕುರುಳಿಸಿ ಮುಂದಾಗುವ ಅಪಾಯ ತಪ್ಪಿಸಿದರು.
ಗ್ರಾಪಂ ಸದಸ್ಯರಾದ ಕಾಂತೇಶ ಕರಿಲಿಂಗಣ್ಣನವರ, ಈರಣ್ಣ ಬಡಿಗೇರ, ಶ್ರೀಶೈಲ ಸಣ್ಣಪ್ಪನವರ, ಪ್ರದೀಪ ನಂದಿಕೇಶ್ವರಮಠ, ನಾಗರಾಜ ಹೊಂಬರಡಿ,ಹನುಮಂತಪ್ಪ ಬುಡಪನಹಳ್ಳಿ, ಮೌನೇಶ ಬಡಿಗೇರ, ರಿಯಾಜ್ ಸಾಲಿ ಇದ್ದರು.
ಭಕ್ತರಿಗೆ ತಟ್ಟಿದ ಬಿಸಿ: ವಿಜಯದಶಮಿ ನಿಮಿತ್ತ ಶನಿವಾರ ರಾಜ್ಯದ ಮೂಲೆಮೂಲೆಗಳಿಂದ ಭಕ್ತರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ್ದರು. ರಸ್ತೆಯಲ್ಲಿ ಚಕ್ಕಡಿ, ಎತ್ತು ಕಟ್ಟಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರಿಂದ ಭಕ್ತರು ಬೈಕ್, ಕಾರು ಇತ್ಯಾದಿ ವಾಹನಗಳನ್ನು ಕೆಲಕಾಲ ರಸ್ತೆ ಬಳಿ ನಿಲ್ಲಿಸಿ ದೇವಸ್ಥಾನಕ್ಕೆ ನಡೆದು ಸಾಗಿದರು. ಬ್ಯಾಡಗಿ ಮಾರ್ಗದಲ್ಲಿ ಆಗಮಿಸಿದ್ದ ಭಕ್ತರು ದೇವಸ್ಥಾನದಿಂದ ಅರ್ಧ ಕಿ.ಮೀ. ದೂರದಿಂದ ನಡೆದು ಬಂದು ದರ್ಶನ ಪಡೆಯುವಂತಾಯಿತು. ಅನಿವಾರ್ಯವಾಗಿ ವಾಹನಗಳು ರಾಮನಹಳ್ಳಿ ಕ್ರಾಸ್ ಮಾರ್ಗವಾಗಿ ಸುತ್ತುವರಿದು ಓಡಾಡಬೇಕಾಯಿತು.