ಅತಿಥಿ ಉಪನ್ಯಾಸಕ ಏಕಾಂಗಿ ಪ್ರತಿಭಟನೆ

Published on

ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ತಾತ್ಕಾಲಿಕ ನೌಕರರನ್ನು ಕಾಯಂಗೊಳಿಸಬೇಕು ಮತ್ತು ವಿದ್ಯಾರ್ಥಿಗಳ ಎಲ್ಲ ಶುಲ್ಕವನ್ನು ಕಡಿತಗೊಳಿಸಬೇಕು ಎಂದು ಒತ್ತಾಯಿಸಿ ಮಾನಸಗಂಗೋತ್ರಿಯ ಸಂಸ್ಕೃತ ವಿಭಾಗದ ಅತಿಥಿ ಉಪನ್ಯಾಸಕ ಡಾ.ರಾಚೋಟಿ ದೇವರು ಸೋಮವಾರ ಏಕಾಂಗಿ ಪ್ರತಿಭಟನೆ ನಡೆಸಿದರು.
ಸಂಸ್ಕೃತ ವಿಭಾಗದ ಮುಂಭಾಗ ಧರಣಿ ನಡೆಸಿದ ಗದಗದ ಮಠವೊಂದರ ಸ್ವಾಮೀಜಿ ಆಗಿರುವ ಡಾ.ರಾಚೋಟಿ ದೇವರು, 7 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ತಾತ್ಕಾಲಿಕ ನೌಕರರನ್ನು ಕಾಯಂ ಮಾಡಿಲ್ಲ ಎಂದು ದೂರಿದರು.
ವಿಶ್ವವಿದ್ಯಾಲಯದ ಮುಖ್ಯ ಉದ್ದೇಶ ಜ್ಞಾನಾರ್ಜನೆ ಮತ್ತು ಸಂಶೋಧನೆಯಾಗಿದೆ. ಆದರೆ ಇಂದು ವಿವಿಗಳು ಕೇವಲ ಪ್ರಮಾಣ ಪತ್ರ ನೀಡುವ ಕೇಂದ್ರಗಳಾಗುತ್ತಿರುವುದು ವಿಷಾದನೀಯ. ಜ್ಞಾನಾರ್ಜನೆ ಹಣವಂತರ ಸ್ವತ್ತಾಗಿ, ಬಡವರಿಗೆ ವಿದ್ಯೆ ಕನಸಾಗುವ ಸಂದರ್ಭ ಎದುರಾಗಿದೆ ಎಂದು ದೂರಿದರು.
ಸದ್ಯದ ಸ್ಥಿತಿಯಲ್ಲಿ ವಿವಿಗಳಿಗೆ ಹಣ ಸಂಪಾದನೆ ಮಾಡುವ ವಿಭಾಗಗಳು ಮಾತ್ರ ಬೇಕು. ಆದಾಯ ಬಾರದಿರುವ ವಿಭಾಗಗಳನ್ನು ಮುಚ್ಚುವ ದುರುದ್ದೇಶದಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ಶುಲ್ಕ ಹೆಚ್ಚಳ ಮಾಡುತ್ತಿದ್ದು, ವಿದ್ಯಾರ್ಥಿ ವೇತನವನ್ನೂ ನೀಡುತ್ತಿಲ್ಲ. ಉಪನ್ಯಾಸಕರ ವೇತನವನ್ನೂ ಕಡಿತ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದರು.
ಬಡ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗಬೇಕಾದರೆ ಶುಲ್ಕ ಕಡಿತಗೊಳಿಸಬೇಕು. ಎಲ್ಲ ಉದ್ಯೋಗಿಗಳನ್ನು ಕಾಯಂಗೊಳಿಸಿ ಭ್ರಷ್ಟಾಚಾರ ಮುಕ್ತ ವಿಶ್ವವಿದ್ಯಾಲಯವನ್ನಾಗಿ ಮಾಡಬೇಕು. ಬೇಡಿಕೆ ಈಡೇರುವವರೆಗೂ ಸತ್ಯಾಗ್ರಹ ನಡೆಸಲಿದ್ದು, ನನ್ನ ಪ್ರಾಣಕ್ಕೆ ಅಪಾಯವಾದರೆ ಕುಲಪತಿ, ಕುಲಸಚಿವ, ಆಡಳಿತ ಮಂಡಳಿಯೇ ಕಾರಣ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net