

ಮೈಸೂರು: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅವೈಜ್ಞಾನಿಕ ತೀರ್ಮಾನ ಕೈಗೊಂಡಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದಿಂದ ಶುಕ್ರವಾರ ಪ್ರತಿಭಟನೆ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು, ನಾನಾ ಘೋಷಣೆ ಕೂಗಿದರು.
ವಿವಿಧ ಕಿಟ್‌ಗಳು, ಲ್ಯಾಪ್‌ಟಾಪ್, ಟ್ಯಾಬ್, ಶಾಲಾ ಕಿಟ್, ಆರೋಗ್ಯ ತಪಾಸಣೆ, ಕಾರ್ಮಿಕರ ಕೌಶಲ್ಯಾಭಿವೃದ್ಧಿ ತರಬೇತಿ ಸೇರಿದಂತೆ ವಿವಿಧ ಕಾರ್ಯಗಳಿಗೆ ಕಾರ್ಮಿಕರು ಬೆವರು ಸುರಿಸಿ ದುಡಿದ ಸೆಸ್ ಹಣವನ್ನು ಮಂಡಳಿ ವತಿಯಿಂದ ಮನಸೋಇಚ್ಚೆ ದುಂದುವೆಚ್ಚ ಮಾಡಲಾಗಿದೆ. ಈ ಕುರಿತು ಅವ್ಯವಹಾರಗಳ ತನಿಖೆ ನಡೆಸಬೇಕೆಂದು ಮನವಿ ಸಲ್ಲಿಸಿದ್ದರೂ ಹಿಂದಿನ ಬಿಜೆಪಿ ಸರ್ಕಾರ, ಈಗಿನ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಕಾರ್ಮಿಕ ಸಚಿವರು ಆಗಸ್ಟ್‌ನಲ್ಲಿ ನಡೆಸಿದ ಸಭೆಯಲ್ಲಿ ಸರ್ಕಾರ ಯಾವುದೇ ಕಿಟ್ ಅಥವಾ ಇತರ ವಸ್ತು ರೂಪದಲ್ಲಿ ಹಿಂದೆ ನೀಡುತ್ತಿದ್ದ ಎಲ್ಲವನ್ನೂ ನಿಲ್ಲಿಸಲಾಗಿದೆ ಎಂದು ತಿಳಿಸಿದ್ದರು. ಆದರೆ, ಪ್ರಥಮ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 7 ಸಾವಿರ ಲ್ಯಾಪ್‌ಟಾಪ್ ಖರೀದಿಸಿದ್ದಾರೆ. ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಿನಲ್ಲಿ 310 ಕೋಟಿ ರೂ. ಖರ್ಚು ಮಾಡಿದ್ದಾರೆ. ಈ ಅಕ್ರಮ ನಿಲ್ಲಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಿಡಿ ಕಾರಿದರು.
ಆರೋಗ್ಯ ತಪಾಸಣೆ ನಡೆಸುವ ಕಾರ್ಯಕ್ರಮವನ್ನು ತಕ್ಷಣ ನಿಲ್ಲಿಸಿ ಆರೋಗ್ಯ ಇಲಾಖೆಯಿಂದ ಉಚಿತ ತಪಾಸಣೆ ನಡೆಸಬೇಕು. ಬಾಕಿ ಇರುವ ಸುಮಾರು 14 ಲಕ್ಷ ಮಕ್ಕಳ ಶೈಕ್ಷಣಿಕ ಧನಸಹಾಯವನ್ನು ಕೂಡಲೇ ವಿಲೇವಾರಿ ಮಾಡಬೇಕು. ಅ.30ರಂದು ಏಕಾಏಕಿ ಹೊರಡಿಸಿರುವ ಅಧಿಸೂಚನೆ ವಾಪಸ್ ಪಡೆದು, ಈ ಹಿಂದೆ ಇದ್ದ ಶೈಕ್ಷಣಿಕ ಧನಸಹಾಯ ಮುಂದುವರಿಸಬೇಕು. ಬೋಗಸ್ ಕಾರ್ಡ್ ತಡೆಯಲು ಕ್ರಮ ಕೈಗೊಂಡು ಮಂಡಳಿ ಅಭಿವೃದ್ಧಿಪಡಿಸಿರುವ ದತ್ತಾಂಶದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ಅವಕಾಶ ನೀಡಬೇಕು. ಕಾರ್ಮಿಕರ ಸಮಸ್ಯೆ ಪರಿಹರಿಸಲು ಎಐಟಿಯುಸಿಗೆ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಎಐಟಿಯುಸಿಯ ಕಾರ್ಯದರ್ಶಿ ಎಚ್.ಬಿ.ಮುದ್ದುಕೃಷ್ಣ, ಜಿಲ್ಲಾಧ್ಯಕ್ಷ ಎನ್.ಕೆ.ದೇವದಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಜಿ.ಸೋಮರಾಜೇ ಅರಸ್, ಕೆ.ಎಸ್.ರೇವಣ್ಣ, ಮುಜಾಹಿದ್‌ಪಾಷ, ಮಹದೇವ ಸೇರಿದಂತೆ ಇತರರಿದ್ದರು.