ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ

RemasterDirector_22abe5b5f
ಹೌಸಿಂಗ್‌ಬೋರ್ಡ್ ಬಡಾವಣೆಯ ನೀರು ಸರಬರಾಜು ಟ್ಯಾಂಕ್ ಬಳಿ ಹೌಸಿಂಗ್ ಬೋರ್ಡ್ ಕಾಲನಿ ನಿವಾಸಿಗಳು ಮೂಲ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಬಡಾವಣೆಯ ನಿವಾಸಿಗಳಾದ ಕೆ.ಸುರೇಶ್, ಎನ್.ಜಿ.ವಸಂತ್, ಮುತ್ತುರಾಜ್, ಚಂದ್ರಪ್ಪ, ಕರಿಗೌಡ, ಶಿವಣ್ಣ, ಮಹೇಶ್, ಕಾಳಯ್ಯ, ವಿಶಾಲಾಕ್ಷಿ, ಶೋಭಾ, ಪೂರ್ಣಿಮಾ, ಸವಿತಾ, ಭಾನು ಇತರರು ಇದ್ದರು.
Published on

ಪಿರಿಯಾಪಟ್ಟಣ: ಅಗತ್ಯ ಮೂಲಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸದಿದ್ದಲ್ಲಿ ಮತದಾನದಿಂದ ಹೊರ ಉಳಿಯುವುದಾಗಿ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲನಿ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.


ಹೌಸಿಂಗ್ ಬೋರ್ಡ್ ಬಡಾವಣೆಯ ನೀರು ಸರಬರಾಜು ಟ್ಯಾಂಕ್ ಬಳಿ ಮಂಗಳವಾರ ಜಮಾವಣೆಗೊಂಡ ನಿವಾಸಿಗಳು, ಖಾಲಿ ಬಿಂದಿಗೆ ಪ್ರದರ್ಶಿಸಿ ಪುರಸಭೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಬಡಾವಣೆಯಲ್ಲಿ 850ಕ್ಕೂ ಹೆಚ್ಚು ನಿವೇಶನಗಳಿದ್ದು ಈಗಾಗಲೇ 40 ಕ್ಕೂ ಹೆಚ್ಚು ಮನೆ ನಿರ್ಮಾಣವಾಗಿದೆ. ಆದರೆ, ಇದುವರೆಗೆ ಮೂಲಸೌಕರ್ಯ ಕಲ್ಪಿಸದೆ ಜನರು ಸಮಸ್ಯೆ ಎದುರಿಸುವಂತಾಗಿದೆ ಎಂದು ಆರೋಪಿಸಿದರು.


2021-22ನೇ ಸಾಲಿನಲ್ಲಿ ಬಡಾವಣೆ ಅಭಿವೃದ್ಧಿಗೆ 1.60 ಕೋಟಿ ರೂ. ಮಂಜೂರಾಗಿದ್ದು, ಆದ್ಯತೆಯ ಮೇರೆಗೆ ಮೂಲಸೌಲಭ್ಯ ಒದಗಿಸಲು ಖರ್ಚು ಮಾಡಬೇಕಿತ್ತು. ಆದರೆ, ಪುರಸಭೆ ಅಧಿಕಾರಿಗಳು ಮೂಲ ಸೌಕರ್ಯಗಳ ಕಡೆ ಗಮನಹರಿಸದೆ ನಿರ್ಲಕ್ಷೃ ತೋರಿದೆ. ಕುಡಿಯುವ ನೀರಿನ ಸೌಲಭ್ಯ, ಒಳಚರಂಡಿ ದುರಸ್ತಿ, ವಿದ್ಯುತ್ ಸೌಕರ್ಯ ಕಲ್ಪಿಸದೆ ಅನ್ಯಾಯವೆಸಗಿದೆ ಎಂದು ದೂರಿದರು.
ಕೆಲವರು ಸ್ವಂತ ಉಪಯೋಗಕ್ಕಾಗಿ ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ. ಈಗ ಕೊಳವೆ ಬಾವಿಗಳಲ್ಲಿ ನೀರು ಬಾರದಂತಾಗಿದ್ದು, ಖಾಸಗಿ ಟ್ಯಾಂಕ್‌ಗಳ ಮೂಲಕ ನೀರನ್ನು ಹಾಕಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಹಲವು ಬಾರಿ ಪುರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮನವಿ ಮಾಡಿದರೂ ಯಾವುದೇ ಕ್ರಮವಹಿಸಿಲ್ಲ ಎಂದು ಆರೋಪಿಸಿದರು.


ಬಡಾವಣೆಯಲ್ಲಿರುವ ಒಳಚರಂಡಿ ಬಹುತೇಕ ಮುಚ್ಚಿಕೊಂಡಿದ್ದು, ನೀರು ಸರಾಗವಾಗಿ ಹರಿಯಲು ತೊಂದರೆಯಾಗುತ್ತಿದೆ ಎಂದು ದೂರಿದರು. ಅಗತ್ಯ ಮೂಲಸೌಕರ್ಯ ಕಲ್ಪಿಸದಿದ್ದಲ್ಲಿ ಮುಂದಿನ ಲೋಕಸಭಾ ಚುನಾವಣೆ ಬಹಿಷ್ಕರಿಸಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಲೋಕಾಯುಕ್ತ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಬಡಾವಣೆಯ ನಿವಾಸಿಗಳಾದ ಕೆ.ಸುರೇಶ್, ಎನ್.ಜಿ.ವಸಂತ್, ಮುತ್ತುರಾಜ್, ಚಂದ್ರಪ್ಪ, ಕರಿಗೌಡ, ಶಿವಣ್ಣ, ಮಹೇಶ್, ಕಾಳಯ್ಯ, ವಿಶಾಲಾಕ್ಷಿ, ಶೋಭಾ, ಪೂರ್ಣಿಮಾ, ಸವಿತಾ, ಭಾನು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net