

ತಾಳಿಕೋಟೆ: ಬಣಜಿಗ ಸಮಾಜದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕಾರಣಿ ಸದಸ್ಯ ಗಂಗಾಧರ ಕಸ್ತೂರಿ ಆಗ್ರಹಿಸಿದರು.
ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವದ್ದಿ ಸಂಘ ತಾಳಿಕೋಟೆ ನಗರ ಘಟಕದ ವತಿಯಿಂದ ಸೋಮವಾರ ಏರ್ಪಡಿಸಿದ್ದ ಪ್ರತಿಭಟನಾ ಮೆರವಣಿಗೆ ನೇತೃತ್ವ ವಹಿಸಿ ಅವರು ಮಾತನಾಡಿದರು.
ಹುಕ್ಕೇರಿಯಲ್ಲಿ ನಡೆದ ಪಂಚಮಸಾಲಿ ಸಮಾವೇಶದಲ್ಲಿ ಬಣಜಿಗ ಸಮಾಜದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ಬಸನಗೌಡ ಪಾಟೀಲ ಹಾಗೂ ವಿಜಯಾನಂದ ಕಾಶಪ್ಪನವರ ಕುರಿತು ಖಂಡಿಸುತ್ತೇವೆ. 2ಎ ಮಿಸಲಾತಿ ಪಡೆಯಲು ಯಾರಿಗೂ ತೊಂದರೆ ಮಾಡಿಲ್ಲ. ಅದು ಸಂವಿದಾನದ ಹಕ್ಕು. ಆದರೆ, ವಿನಾಕಾರಣ ಒಂದು ಸಮಾಜವನ್ನು ಗುರಿಯನಾಗ್ನಿಟ್ಟುಕೊಂಡು ಮಾತನಾಡುವುದು ತಪ್ಪು ಎಂದು ಹೇಳಿದರು.
ಮೀಸಲಾತಿಯೊಳಗೆ ಸುಮಾರು 102 ಉಪಜಾತಿಗಳಿದ್ದರೂ ಕೇವಲ ಒಂದು ಸಮಾಜವನ್ನು ಎತ್ತಿಕಟ್ಟಿ ಬಹಳ ಸಲ ಸಮಾಜ ವಿರೋಧಿ ಮಾತುಗಳನ್ನಾಡಿದ್ದು ಕಂಡು ಬಂದಿದೆ. ಹೀಗಾಗಿ ಈ ಇಬ್ಬರು ನಾಯಕರು ನಮ್ಮ ಸಮಾಜದವರ ಬಹಿರಂಗ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ಬಣಜಿಗ ಸಮಾಜದ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಚಿನವಾರ ಮಾತನಾಡಿ, ಬಣಜಿಗ ಸಮಾಜವನ್ನು ಕೀಳಾಗಿ ಕಂಡು ಅವಹೇಳನ ಮಾಡಿರುವ ಶಾಸಕ ಯತ್ನಾಳ ಹಾಗೂ ಮಾಜಿ ಶಾಸಕ ಕಾಶಪ್ಪನವರ ಅವರು ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.
ಬಣಜಿಗ ಸಮಾಜದ ತಾಲೂಕು ಪ್ರಧಾನ ಕಾರ್ಯದರ್ಶಿ ಆರ್.ಜಿ.ಅಳ್ಳಗಿ, ತಾಲೂಕು ಅಧ್ಯಕ್ಷ ಸುಭಾಸ ಸಾಲಂಕಿ, ಗೌರವ ಅಧ್ಯಕ್ಷ ಶಿವಲಿಂಗಪ್ಪ ಪಾಲ್ಕಿ, ನಗರ ಘಟಕದ ಖಜಾಂಚಿ ರಮೇಶ ಸಾಲಂಕಿ, ಅಣ್ಣಪ್ಪ ವಾಲಿ, ಅಶೋಕ ಬಳಗಾನೂರ, ಪ್ರಭು ಕತ್ತಿ, ಚನ್ನಮಲ್ಲು ಕತ್ತಿ, ಎಂ.ಎಸ್.ಸರಶೆಟ್ಟಿ, ಜಿ.ಎಸ್.ಜಮ್ಮಲದಿನ್ನಿ, ಮುರುಗೇಶ ಕಡಕೋಳ, ರವೀಂದ್ರ ಅಂಗಡಿ, ಬಸವರಾಜ ನಾಲತವಾಡ ಇತರರು ಇದ್ದರು.
ನಂತರ ಸಮಾಜದ ನಗರ ಘಟಕದ ಅಧ್ಯಕ್ಷ ಈರಪ್ಪ ಕಲಬುರ್ಗಿ ನೇತೃತ್ವದಲ್ಲಿ ತಹಸೀಲ್ದಾರ್ ಶ್ರೀಧರ ಗೂಟೂರ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.