ಸ್ಥಳಿಯ ಸಂಸ್ಥೆಗಳ ಶೇ. 5ರಷ್ಟು ಅನುದಾನ ಅಂಗವಿಕಲರಿಗೆ ಮೀಸಲಿರಲಿ

udp-28-protest 1
Published on

ಉಡುಪಿ: ಸ್ಥಳಿಯ ಸಂಸ್ಥೆಗಳಲ್ಲಿ ಅಂಗವಿಕಲರಿಗೆ ಮೀಸಲಿರಿಸಿದ ಶೇ. 5 ಅನುದಾನವನ್ನು ದುರುಪಯೋಗವಾಗುತ್ತಿದೆ. ಈ ಹಣವನ್ನು ಅಂಗವಿಕಲರ ಕಲ್ಯಾಣಕ್ಕೆ ಬಳಸದೆ ಅಂಗವಿಕಲರ ಹೆಸರಲ್ಲಿ ರಸ್ತೆ, ಚರಂಡಿ ಮೊದಲಾದ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಹೀಗಾಗಿ ಸಂಪೂರ್ಣ ಮೊತ್ತವನ್ನು ಅಂಗವಿಕಲರ ಕಲ್ಯಾಣಕ್ಕಾಗಿಯೇ ಬಳಸಬೇಕು. ಈ ಬಗ್ಗೆ ಸರ್ಕಾರ ಇಲಾಖೆಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ದಿವ್ಯಾಂಗರ ರಕ್ಷಣಾ ಸಮಿತಿಯ ಸಂಚಾಲಕ, ನಗರಸಭೆ ಸದಸ್ಯ ವಿಜಯ ಕೊಡವೂರು ಆಗ್ರಹಿಸಿದರು.

ಸೋಮವಾರ ಜಿಲ್ಲಾ ಅಂಗವಿಕಲರು ಹಾಗೂ ಪಾಲಕರ ಒಕ್ಕೂಟ ಸಮಿತಿ, ದಿವ್ಯಾಂಗರ ರಕ್ಷಣಾ ಸಮಿತಿ, ಸಕ್ಷಮ ಸಂಸ್ಥೆ ಉಡುಪಿ ಹಾಗೂ ವಿವಿಧ ಜಿಲ್ಲೆಯ ಸಂ&ಸಂಸ್ಥೆಗಳ ವತಿಯಿಂದ ಅಂಗವಿಕಲರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸುಮಾರು 13 ರಿಂದ 15 ಸಾವಿರ ಅಂಗವಿಕಲರಿದ್ದಾರೆ. 124 ಮಂದಿ ಬೆನ್ನುಮೂಳೆ ಮುರಿತಕ್ಕೊಳಗಾಗಿ ಮನೆಯಲ್ಲಿ ಹಾಸಿಗೆ ಹಿಡಿದಿದ್ದಾರೆ. ಇವರಿಗೆ ಮನೆಯಲ್ಲಿಯೇ ವೈದ್ಯಕಿಯ ಸೇವೆ ಸಿಗಬೇಕು. ಶೇ.74 ರವರೆಗಿನ ಅಂಗವೈಕಲ್ಯ ಹೊಂದಿರುವವರಿಗೆ ಮಾಸಿಕ 5 ಸಾವಿರ ರೂ. ಜೀವನ ಭತ್ಯೆ ನೀಡಬೇಕು. ಅಂಗವಿಕಲ ಹಕ್ಕುಗಳ ಕಾಯ್ದೆ 2016 ಸಮರ್ಪಕವಾಗಿ ಜಾರಿಗೆ ತರಬೇಕು. ತೀವ್ರ ಅಂಗವಿಕಲತೆ ಉಳ್ಳವರನ್ನು ನೋಡಿಕೊಳ್ಳುವರಿಗೆ ಮಾಸಿಕ 3 ಸಾವಿರ ರೂ. ಪೋಷಣಾ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಕುಂದಾಪುರ&ಬೈಂದೂರು ತಾಲೂಕು ಸಮಿತಿ ಅಧ್ಯಕ್ಷ ಸಂತೋಷ ಜಾಲಾಡಿ ಮಾತನಾಡಿ, ಖಾಸಗಿ ಬಸ್​ಗಳಲ್ಲಿ ಅಂಗವಿಕಲರಿಗೆ ಶೇ.50 ರಿಯಾಯಿತಿ ನೀಡುತ್ತಿದ್ದು, ಕೋವಿಡ್​ ಬಳಿಕ ಅದನ್ನು ಸ್ಥಗಿತಗೊಳಿಸಲಾಗಿದೆ. ಅದನ್ನು ಮತ್ತೆ ಜಾರಿಗೊಳಿಸಬೇಕು. ಉಪ್ಪುಂದ, ತಲ್ಲೂರು, ಉಪ್ಪಿನಕುದ್ರು, ಕಿರಿಮಂಜೇಶ್ವರ, ಹೆಮ್ಮಾಡಿ, ಕಟ್​ಬೆಲ್ತೂರು, ನಾಗೂರು, ಮರವಂತೆ, ನಾವುಂದ, ಗಂಗೊಳ್ಳಿ ಪ್ರದೇಶಗಳು ಎಂಡೋಸಲ್ಫಾನ್​ ಸಿಂಪಡಣೆಯ ಗಡಿರೇಖೆ ಪ್ರದೇಶಗಳಾಗಿದ್ದು, ಈ ಸ್ಥಳಗಳನ್ನು ಎಂಡೋಸಲ್ಫನ್​ ಪೀಡಿತ ಪ್ರದೇಶಗಳೆಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು.

ದಿವ್ಯಾಂಗ ರಕ್ಷಣಾ ಅಧ್ಯಕ್ಷ ಮಂಜುನಾಥ ಹೆಬ್ಬಾರ್​ ಮಾತನಾಡಿ, ಹೀಮೊಫಿಯಾಕ್ಕೆ ಸಂಬಂಧಿಸಿದಂತೆ ಚುಚ್ಚುಮದ್ದಿಗಾಗಿ ಅನುದಾನ ಕಾದಿರಿಸಿ ಚುಚ್ಚುಮದ್ದು ಸದಾಕಾಲ ಲಭ್ಯವಿರುವಂತೆ ಮಾಡಬೇಕು. ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿಯೂ ಲಸಿಕೆ ಸಿಗುವಂತಾಗಬೇಕು ಎಂದರು.

ಗೌರವಾಧ್ಯಕ್ಷ ವೆಂಕಟೇಶ್​ ಕೋಣಿ, ಪ್ರಮುಖರಾದ ರವೀಂದ್ರ, ಲತಾ ಭಟ್​, ಹರೀಶ್​ ಶೆಟ್ಟಿ, ಪೃಥ್ವಿರಾಜ್​ ಶೆಟ್ಟಿ, ಹರೀಶ್​ ತೋಳ್ಪಾಡಿ ಮೊದಲಾದವರು ಉಪಸ್ಥಿತರಿದ್ದರು. ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ವಿವಿಧ ಬೇಡಿಕೆಗಳ ಬಗ್ಗೆ ಮನವಿ ಅರ್ಪಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net