

ಮದ್ದೂರು: ನರೇಗಾ ಯೋಜನೆ ಬಲವರ್ಧನೆ, ನಿವೇಶನ ರಹಿತರಿಗೆ ನಿವೇಶನ, ಸರ್ಕಾರಿ ಭೂಮಿಯಲ್ಲಿ ವಾಸ ಮಾಡುತ್ತಿರುವ ಬಡವರಿಗೆ ಹಕ್ಕು ಪತ್ರ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅ.11ರಂದು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳ ಮುಂದೆ ಏಕಕಾಲಕ್ಕೆ ಸಾಮೂಹಿಕವಾಗಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಂ.ಪುಟ್ಟಮಾದು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಕೂಲಿಕಾರರ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ಕಾಯಕ ಬಂಧುಗಳಿಗೆ ತರಬೇತಿ, ಪ್ರೋತ್ಸಾಹಧನ, ಗುರುತಿನ ಚೀಟಿ ನೀಡದಿರುವುದು ಹಾಗೂ ಸರ್ಕಾರಿ ಭೂಮಿಯಲ್ಲಿ ವಾಸ ಮಾಡುತ್ತಿರುವ ಬಡವರಿಗೆ ಹಕ್ಕುಪತ್ರ ನೀಡದಿರುವುದು ಸೇರಿದಂತೆ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಹೋರಾಟಕ್ಕೆ ರಾಜ್ಯ ಸಮಿತಿ ಕರೆ ನೀಡಿದ್ದು, ಅದರಂತೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳ ಮುಂದೆ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಹನುಮೇಶ್, ಮಳವಳ್ಳಿ ತಾಲೂಕು ಅಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ, ಕಾರ್ಯದರ್ಶಿ ಸರೋಜಮ್ಮ, ಮದ್ದೂರು ತಾಲ್ಲೂಕು ಕಾರ್ಯದರ್ಶಿ ಟಿ.ಪಿ ಅರುಣ್ಕುಮಾರ್, ಮಂಡ್ಯ ತಾಲೂಕು ಅಧ್ಯಕ್ಷ ಅಮಾಸಯ್ಯ, ಸಹ ಕಾರ್ಯದರ್ಶಿ ಸಂತೋಷ್, ರಾಜ್ಯ ಸಮಿತಿ ಸದಸ್ಯರಾದ ಬಿ.ಎ.ಮಧುಕುಮಾರ, ಶುಭಾವತಿ, ಟಿ.ಎಚ್. ಆನಂದ್, ರಾಮಣ್ಣ, ಪಾಪಣ್ಣ, ಮಲ್ಲೇಶ್ ಇದ್ದರು.