

ಮುಧೋಳ : ತಿಮ್ಮಾಪುರದ ರೈತರ ಸಕ್ಕರೆ ಕಾರ್ಖಾನೆಯನ್ನು ಸರ್ಕಾರ ಇಲ್ಲವೆ ಆಡಳಿತ ಮಂಡಳಿ ಅಥವಾ ಲೀಜ್ ಮೇಲೆ ಆರಂಭಿಸಿ ರೈತರ ಬಾಕಿ ಹಾಗೂ ಕಾರ್ಮಿಕರ ಹಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಹೋರಾಟ ಸಮಿತಿಯಿಂದ ಜು.11 ರಂದು ಬೆಳಗ್ಗೆ 10.30ಕ್ಕೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಬಸವಂತ ಕಾಂಬಳೆ ಹೇಳಿದರು.
ನಗರದ ಕಾನಿಪ ಕಾರ್ಯಾಲಯದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರೈತರು ಮಳೆಯಾಗದೆ ಕಂಗಾಲಾಗಿದ್ದು, ಕಳೆದ ಸಾಲಿನಲ್ಲಿ ಕಳಿಸಿದ ಕಬ್ಬಿನ ಬಿಲ್ ಇನ್ನೂ ಬಂದಿಲ್ಲ.
2021-22ರಲ್ಲಿ ಕೊಡಬೇಕಾದ ಎರಡನೇ ಕಂತಿನ 62 ರೂಗಳನ್ನು ಎಲ್ಲ ಕಾರ್ಖಾನೆಗಳು ಕೊಡಬೇಕು ಹಾಗೂ ಕಳೆದ ಬಾರಿ 50 ರೂಗಳನ್ನು ಕಾರ್ಖಾನೆ ಮಾಲೀಕರು ಅಥವಾ ಸರ್ಕಾರ ನೀಡಬೇಕೆಂದು ಈ ಹಿಂದಿನ ಮುಖ್ಯಮಂತ್ರಿ ಮಾತು ಕೊಟ್ಟಿದ್ದು, ಈಗ ಈ ಸರ್ಕಾರ ಅದನ್ನು ಈಡೇರಿಸಬೇಕು.
ಜತೆಗೆ ನಿರಾಣಿ ಸಕ್ಕರೆ ಕಾರ್ಖಾನೆಯವರು 2018-19ರ 20 ಕೋಟಿ ಹಣವನ್ನು ಇನ್ನೂ ನೀಡಿಲ್ಲ. ಅದನ್ನೂ ಕೂಡಲೇ ನೀಡಬೇಕೆಂದು ತಿಳಿಸಿದರು.
ನೀರು ಬಿಡಲು ಒತ್ತಾಯ ಈಗಾಗಲೇ ಮಳೆಯಾಗದ್ದರಿಂದಾಗಿ ಕಬ್ಬು ಸೇರಿ ವಿವಿಧ ಬೆಳೆಗಳು ಒಣಗುತ್ತಿವೆ. ಕೂಡಲೇ ಜಿಎಲ್‌ಬಿಸಿ ಕಾಲುವೆಗೆ 2400 ಕ್ಯೂಸೆಕ್ ನೀರನ್ನು ಬೀಳಗಿವರೆಗೆ ಹರಿಸಬೇಕು. ಸರ್ಕಾರ ರೈತರಿಗಾದ ನಷ್ಟವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.ಹನುಮಂತಗೌಡ ಪಾಟೀಲ, ಹನುಮಂತ ನವಾಬ, ಮಹೇಶ ಪಾಟೀಲ, ದುಂಡಪ್ಪ ಯರಗಟ್ಟಿ, ರುದ್ರಪ್ಪ ಅಡವಿ, ಅಶೋಕ ಪಡಸಲಗಿ, ನಿಂಗಪ್ಪ ಹೊಸಕೋಟಿ, ಕಲ್ಮೇಶ ಹಣಗೂಜಿ, ರಾಮಣ್ಣ ಸಾವಂತ್ರಿ, ಸೋಮಲಿಂಗ ಅಕ್ಕಿಮರಡಿ ಇದ್ದರು.