

ಹುಬ್ಬಳ್ಳಿ : ಇಲ್ಲಿನ ಕಾರವಾರ ರಸ್ತೆಯ ತ್ಯಾಜ್ಯ ವಿಲೇವಾರಿ ಘಟಕ (ಹೇಸಿಗೆಮಡ್ಡಿ)ದಿಂದಾಗಿ ಸುತ್ತಲಿನ ನಿವಾಸಿಗಳಿಗೆ ಆಗುತ್ತಿರುವ ತೊಂದರೆ ನಿವಾರಿಸುವಂತೆ ಒತ್ತಾಯಿಸಿ ಹೇಸಿಗೆಮಡ್ಡಿ ತೆರವು ಹೋರಾಟ ಸಮಿತಿಯಿಂದ ಸೋಮವಾರ ಬೆಳಗ್ಗೆ ಗಾರ್ಬೆಜ್ ಯಾರ್ಡ್ಗೆ ಬರುವ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಲಾಯಿತು.
ಸಮಿತಿ ಅಧ್ಯಕ್ಷ ನಾಗರಾಜ ಗೌರಿ ಮಾತನಾಡಿ, 21 ಎಕರೆ ಜಾಗ ಇರುವ ಗಾರ್ಬೆಜ್ ಯಾರ್ಡ್ ಸುತ್ತಲೂ ಕಂಪೌಂಡ್ ಇಲ್ಲ. ಇದರಿಂದಾಗಿ ನಾಯಿಗಳು ಯಾರ್ಡ್ನಲ್ಲಿನ ಕಸವನ್ನು ಕಚ್ಚಿಕೊಂಡು ಮನೆಗಳು ಸುತ್ತಲೂ ಎಸೆಯುತ್ತಿವೆ. ಇಲ್ಲಿನ ಕಸಕ್ಕೆ ಬೆಂಕಿ ಹೊತ್ತಿ ಸುತ್ತಲಿನ ಪ್ರದೇಶದಲ್ಲಿ ಹೊಗೆ ಹರಡುತ್ತಿದೆ. ಇದರಿಂದಾಗಿ ನಾಗರಿಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ದೂರಿದರು.
ಗಾರ್ಬೆಜ್ ಯಾರ್ಡ್ನ ಸಮಸ್ಯೆ ನಿವಾರಣೆಯಾಗುವವರೆಗೆ ಪ್ರತಿಭಟನೆ ಮುಂದುವರೆಯಲಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜನರು, ಗಾರ್ಬೆಜ್ ಯಾರ್ಡ್ ಸಮಸ್ಯೆ ನಿವಾರಿಸುವಂತೆ ಒತ್ತಾಯಿಸಿದರು. ಮಹಾನಗರ ಪಾಲಿಕೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು. ಪ್ರತಿಭಟನೆಯಿಂದಾಗಿ ವಾಹನ ಸಂಚಾರಕ್ಕೆ ತೊಂದರೆವುಂಟಾಗಿತ್ತು.
ದೀಪಾ ಗೌರಿ, ಖಾಜಾಹುಸೇನ್ ಶಿರೂರ, ಶಿವಕುಮಾರ ಗೋಕಾವಿ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.