

ಹಾಸನ: ಸರ್ಕಾರಿ ಕೆರೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿ ಕಾನೂನು ಬಾಹಿರವಾಗಿ ಕಂದಾಯ ದಾಖಲೆ ತಿದ್ದುಪಡಿ ಮಾಡಿ ಖಾತೆ ಮಾಡಿಸಿಕೊಳ್ಳಲಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹೊಳೆನರಸೀಪುರ ತಾಲೂಕಿನ ಶ್ರವಣೂರು ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.
ಶ್ರವಣೂರು ಗ್ರಾಮದ ನಿವಾಸಿ ಅನಂತರಾಮಯ್ಯ ಮಾತನಾಡಿ, ಶ್ರವಣೂರು ಗ್ರಾಮದ ಸರ್ವೇ ನಂ.57ರಲ್ಲಿ 01 ಎಕರೆ 27 ಗುಂಟೆ, ಸರ್ವೇ ನಂ.58ರಲ್ಲಿ 17 ಗುಂಟೆ ಮತ್ತು 59ರಲ್ಲಿ 27 ಎಕರೆ 19 ಗುಂಟೆಯಲ್ಲಿ ಸರ್ಕಾರಿ ಕೆರೆ ಇದೆ. ಈ ಸರ್ಕಾರಿ ಕೆರೆ ಶ್ರವಣೂರು ಗ್ರಾಮದ ಸಾರ್ವಜನಿಕ ಆಸ್ತಿ ಆಗಿದೆ ಮತ್ತು ಅಕ್ಕ-ಪಕ್ಕ ಗ್ರಾಮದ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಬಹುಮುಖ್ಯವಾಗಿದೆ. ಆದರೆ ಈ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಸರ್ಕಾರಿ ಕೆರೆಯನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳುವ ಉದ್ದೇಶದಿಂದ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವವರ ವಿರುದ್ಧ ಇಲ್ಲಿಯವರೆಗೂ ಯಾವುದೇ ರೀತಿಯ ಶಿಸ್ತು ಕ್ರಮ ಕೈಗೊಂಡಿಲ್ಲ. ಈಗಲಾದರೂ ಕಾನೂನು ಬಾಹಿರವಾಗಿ ಮೂಲ ದಾಖಲೆಗಳನ್ನು ತಿದ್ದುಪಡಿ ಮಾಡಿರುವ ಬಗ್ಗೆ ತನಿಖೆ ಮಾಡಿ ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶ್ರವಣೂರು ಗ್ರಾಮದ ಯೋಗೇಶ್, ಚಂದ್ರಶೇಖರ್, ಸ್ವಾಮಿ, ಪ್ರಸನ್ನ, ಎಸ್.ಬಿ.ರಾಜೇಗೌಡ, ಕೃಷ್ಣೇಗೌಡ, ಭುವನೇಶ್, ದ್ಯಾವಯ್ಯ, ಗಂಗಾಧರ್, ಲೋಕೇಶ್, ರವಿ, ಕೆಂಪೇಗೌಡ, ದೇವರಾಜು ಸೇರಿದಂತೆ ಇತರರು ಪಾಲ್ಗೊಂಡಿದ್ದರು.