ಠೇವಣಿ ಹಣ ಮರಳಿಸುವಂತೆ ಪ್ರತಿಭಟನೆ

IMG20250117203836.jpg
Published on

ಬೆಳಗಾವಿ: ಬೈಲಹೊಂಗಲ ಕಿತ್ತೂರು ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಠೇವಣಿದಾರರ ಹಣ ಮರು ಪಾವತಿಸುತ್ತಿಲ್ಲ. ಅಲ್ಲದೇ ಬ್ಯಾಂಕ್‌ನಲ್ಲಿ ಸುಮಾರು 600 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ನೂರಾರು ಠೇವಣಿದಾರರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಧರಣಿ ನಡೆಸಿದರು.

ನಗರದ ಕನ್ನಡ ಸಾಹಿತ್ಯ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ರ‌್ಯಾಲಿ ನಡೆಸಿದ ಠೇವಣಿದಾರರು, ಸೊಸೈಟಿ ಚೇರ್ಮನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಡವರು, ಕೂಲಿಕಾರರು ಕಷ್ಟಪಟ್ಟು ದುಡಿದ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದಾರೆ. ಅಲ್ಲದೇ ಕೆಲವೊಂದಿಷ್ಟು ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮತ್ತೊಂದಿಷ್ಟು ಜನರು ಮನೆ ಕಟ್ಟುತ್ತಿದ್ದಾರೆ. ಅಲ್ಲದೇ ಮದುವೆಯನ್ನೂ ಆಗುತ್ತಿದ್ದಾರೆ. ಅಂತವರಿಗೆ ಹಣದ ಸಮಸ್ಯೆ ಆಗುತ್ತಿದೆ ಎಂದು ಠೇವಣಿದಾರರು ಅಳಲು ತೋಡಿಕೊಂಡರು.

ಠೇವಣಿದಾರ ವಿಜಯ ಗೌಡರ ಸುದ್ದಿಗಾರರೊಂದಿಗೆ ಮಾತನಾಡಿ, ಚನ್ನಮ್ಮ ಬ್ಯಾಂಕ್‌ನಲ್ಲಿ ಒಟ್ಟು 762 ಕೋಟಿ ರೂ. ಠೇವಣಿ ಇಟ್ಟಿರುವ ಬಗ್ಗೆ ನಮಗೆ ಮಾಹಿತಿ ಇದೆ. ಇದರಲ್ಲಿ ಬ್ಯಾಂಕ್ ಚೇರ್ಮನ್ ಮತ್ತ ಅವರ ಮನೆಯವರೇ ಅಂದಾಜು 433 ಕೋಟಿ ರೂ. ಸಾಲ ತೆಗೆದುಕೊಂಡಿದ್ದಾರೆ. ಈ ಹಣವನ್ನು ಅವರು ಬ್ಯಾಂಕ್‌ಗೆ ಮರಳಿಸಿಲ್ಲ. ಅದರ ಬಡ್ಡಿ ಎಲ್ಲ ಸೇರಿ ಈಗ 551 ಕೋಟಿ ರೂ. ಆಗಿದೆ. ಈಗ ನಾವು ನಮ್ಮ ಠೇವಣಿ ಹಣ ಕೇಳಲು ಹೋದರೆ ನಮ್ಮ ಆಸ್ತಿ ಮಾರಾಟ ಮಾಡಿ ಕೊಡುತ್ತೇವೆ ಎನ್ನುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದ ನಮ್ಮನ್ನು ಅಲೆದಾಡಿಸುತ್ತಿದ್ದಾರೆ. ಹಾಗಾಗಿ, ತಪ್ಪಿತಸ್ಥರ ವಿರುದ್ಧ ಕ್ರಮವಾಗಿ ನಮ್ಮ ದುಡ್ಡು ನಮಗೆ ವಾಪಸ್ ಕೊಡಬೇಕು ಎಂದು ಆಗ್ರಹಿಸಿದರು.

ಗ್ರಾಹಕ ಮಹಾರುದ್ರಪ್ಪ ನೀರಲಗಿ ಮಾತನಾಡಿ, ಬಡ ಜನರೇ ಹೆಚ್ಚು ಚನ್ನಮ್ಮ ಬ್ಯಾಂಕ್‌ನಲ್ಲಿ ಹಣ ಠೇವಣಿ ಇಟ್ಟಿದ್ದಾರೆ. ಬಡವರ ಹಣವನ್ನು ಒಂದೇ ಕುಟುಂಬಕ್ಕೆ ಸುಮಾರು 515 ಕೋಟಿ ಹಣ ಸಾಲ ಹೇಗೆ ಕೊಟ್ಟರು ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಈಗಿರುವ ಸಹಕಾರಿ ಸಂಘದ ಕಾಯ್ದೆ ಗ್ರಾಹಕರ ಪರವಾಗಿಲ್ಲ. ಮೊದಲು ಅದನ್ನು ತೆಗೆದು ಹಾಕಬೇಕು. ನಮ್ಮ ಹಣ ನಮಗೆ ಮರಳಿಸಬೇಕು ಎಂದು ಒತ್ತಾಯಿಸಿದರು.

ತಮ್ಮ ಠೇವಣಿ ಹಣ ಮರಳಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಠೇವಣಿದಾರರು ಮನವಿ ರವಾನಿಸಿದರು. ಈ ವೇಳೆ ನೂರಾರು ಠೇವಣಿದಾರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net