ತಮಿಳು ಕಾಲನಿ ನಿವಾಸಿಗಳನ್ನು ಸ್ಥಳಾಂತರಿಸಿ: ನಗರದಲ್ಲಿ ಬೃಹತ್ ಪ್ರತಿಭಟನಾ ಜಾಥಾ

Protest to evict Tamil colony residents Mandya
Published on

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಗೆ ಸೇರಿದ ಜಾಗ ಅತಿಕ್ರಮಿಸಿ ವಾಸಿಸುತ್ತಿರುವ ತಮಿಳು ಕಾಲನಿ ಸ್ಥಳಾಂತರಕ್ಕೆ ಆಗ್ರಹಿಸಿ ಕನ್ನಡ ಹಾಗೂ ರೈತಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಬೈಕ್ ಜಾಥಾ ನಡೆಸಿದರು.

ಕರ್ನಾಟಕ ರಕ್ಷಣಾ ವೇದಿಕೆ, ರಾಜ್ಯ ರೈತ ಸಂಘ, ಕರ್ನಾಟಕ ರಾಷ್ಟ್ರ ಸಮಿತಿ, ಜೈ ಕರ್ನಾಟಕ ಪರಿಷತ್ ಹಾಗೂ ಕರುನಾಡ ಸೇವಕರು ಸಂಘಟನೆ, ರೈತ ಪರ ಸಂಘಟನೆ ಕಾರ್ಯಕರ್ತರು ಮಿಮ್ಸ್ ಆವರಣದಿಂದ ಬೈಕ್‌ನಲ್ಲಿ ಜಾಥಾ ಹೊರಟು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಕರಪತ್ರ ಹಂಚಿಕೆ ಮಾಡಿದರು. ಅಂತೆಯೇ ತಮಿಳು ಕಾಲನಿ ಸ್ಥಳಾಂತರಿಸಿ ಮೆಡಿಕಲ್ ಕಾಲೇಜು ಭೂಮಿ ಉಳಿಸಿ ಎಂದು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ದೊಡ್ಡಾಸ್ಪತ್ರೆ ಎಂದೇ ಕರೆಸಿಕೊಳ್ಳುತ್ತಿದ್ದ ಜಿಲ್ಲಾಸ್ಪತ್ರೆ ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯಾಗಿ ರೂಪಾಂತರಗೊಂಡಿದೆ. ಈ ಆಸ್ಪತ್ರೆಯ ಮಂಡ್ಯ ಮಾತ್ರವಲ್ಲದೆ ನೆರೆಯ ರಾಮನಗರ, ಚನ್ನಪಟ್ಟಣ, ಕುಣಿಗಲ್, ಟಿ.ನರಸೀಪುರ ಸೇರಿದಂತೆ 30 ಲಕ್ಷ ಜನರಿಗೆ ಚಿಕಿತ್ಸೆ ನೀಡುವ ಕೇಂದ್ರವಾಗಿದೆ. ಎಂಟು ನೂರು ಹಾಸಿಗೆಗಳ ಈ ಆಸ್ಪತ್ರೆಗೆ ಒಳರೋಗಿಗಳು ಮಾತ್ರವಲ್ಲದೆ ಪ್ರತಿನಿತ್ಯ ಮೂರು ಸಾವಿರಕ್ಕೂ ಅಧಿಕ ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಎಂಬಿಬಿಎಸ್, ನರ್ಸಿಂಗ್, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಕಲಿಕೆ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಈಗ ಎದೆರೋಗದ (ಹೃದ್ರೋಗ) ಆಸ್ಪತ್ರೆ, ಅಪಘಾತದಲ್ಲಿ ಗಾಯಗೊಂಡವರಿಗೆ ತಕ್ಷಣದ ಚಿಕಿತ್ಸೆ ಒದಗಿಸಲು ಟ್ರಾಮಾ ಕೇರ್, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕಿದೆ. ಈ ಆಸ್ಪತ್ರೆಗಳ ನಿರ್ಮಾಣಕ್ಕೆ 30 ಕೋಟಿ ರೂ.ಗೂ ಹೆಚ್ಚಿನ ಅನುದಾನವನ್ನು ಸರ್ಕಾರ ನೀಡಿದೆ. ಆದರೂ ಸಹ ಈವರೆಗೂ ನಿರ್ಮಾಣವಾಗದೆ ಇಂತಹ ರೋಗಭಾದಿತರು ಬೆಂಗಳೂರು ಅಥವಾ ಮೈಸೂರಿಗೆ ತೆರಳಬೇಕಿದೆ. ದಕ್ಷ ವೈದ್ಯರಿದ್ದರೂ ಹೆರಿಗೆ ವಾರ್ಡ್‌ನಲ್ಲಿ ಹಾಸಿಗೆ ಲಭ್ಯವಿಲ್ಲದೆ, ಒಂದೇ ಹಾಸಿಗೆಯಲ್ಲಿ ಎರಡು ಅಥವಾ ಮೂರು ಗರ್ಭಿಣಿಯರು ಪರಿತಪಿಸುವಂತಾಗಿದೆ. ಅಷ್ಟೇ ಅಲ್ಲದೆ ತಾಯಿ ಮಕ್ಕಳ ಆಸ್ಪತ್ರೆಗೆ ಮಂಡ್ಯ ಮೆಡಿಕಲ್ ಕಾಲೇಜು ಆವರಣದಲ್ಲಿ ಜಾಗವಿಲ್ಲದೆ ಮಂಡ್ಯದಿಂದ ಹನ್ನೆರೆಡು ಕಿ.ಮೀ ದೂರದ ಬಿ.ಹೊಸೂರು ಕಾಲನಿಯಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಿಸಲಾಗಿದೆ. ಅಗತ್ಯ ವಾಹನ ಸೌಕರ್ಯವಿಲ್ಲದೆ ಹೊಸೂರು ಕಾಲನಿ ಆಸ್ಪತ್ರೆಗೆ ಜನರು ಬಾರದೆ ಬಾಗಿಲು ಮುಚ್ಚುವಂತಾಗಿದೆ ಎಂದು ದೂರಿದರು.

ಸ್ವತಂತ್ರ ಪೂರ್ವದಲ್ಲಿ ಜಿಲ್ಲಾಸ್ಪತ್ರೆಗೆ 40 ಎಕರೆ ಭೂ ಸ್ವಾಧೀನವಾಗಿದ್ದರೂ ಅದರಲ್ಲಿ 26 ಎಕರೆ ಮಾತ್ರ ಸ್ವಾಧೀನದಲ್ಲಿದೆ. ಮೆಡಿಕಲ್ ಕಾಲೇಜಿಗೆ ಹೊಂದಿಕೊಂಡ ಇನ್ನುಳಿದ 14 ಎಕರೆಯಲ್ಲಿ ತಮಿಳು ಕಾಲನಿ ವಾಸಿಗಳು ಹಾಗೂ ಕೆಲ ಬಲಾಢ್ಯರು ಮೆಡಿಕಲ್ ಕಾಲೇಜು ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ. ಹೈಕೋರ್ಟ್ ಸಹ ತಮಿಳುವಾಸಿಗಳಿಗೆ ಪರ್ಯಾಯ ವಸತಿ ಒದಗಿಸಿ ಸ್ಥಳಾಂತರಿಸಲು ಆದೇಶ ನೀಡಿದೆ. ಹಾಗಾಗಿ ತಮಿಳು ನಿವಾಸಿಗಳಿಗಾಗಿ ಮಂಡ್ಯ ಕೆರೆಅಂಗಳದ ವಿವೇಕಾನಂದ ಬಡಾವಣೆಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ 38 ಕೋಟಿ ರೂ ವೆಚ್ಚದಲ್ಲಿ 576 ಮನೆ ನಿರ್ಮಿಸಿಕೊಟ್ಟಿದೆ. ಆದರೆ ಅಲ್ಲಿಗೆ ತರಲು ತಮಿಳು ನಿವಾಸಿಗಳು ನಿರಾಕರಿಸುತ್ತಿರುವುದು ಏತಕ್ಕೆ ಎಂದು ಪ್ರಶ್ನಿಸಿದರು.

ರಾಜ್ಯ ಉಚ್ಚ ನ್ಯಾಯಾಲಯ ಮೆಡಿಕಲ್ ಕಾಲೇಜಿನ ಪರವಾದ ತೀರ್ಪು ನೀಡಿದರು. ಅದನ್ನು ಜಾರಿಗೊಳಿಸಲು ಈವರೆಗಿನ ಯಾವುದೆ ನಿರ್ದೇಶಕರು ಮತ್ತು ಆಡಳಿತಾಧಿಕಾರಿಗಳು ಯಾವುದೆ ಪ್ರಯತ್ನ ನಡೆಸಲಿಲ್ಲ. ಜನಪರ ಸಂಘಟನೆಗಳ ಹೋರಾಟದ ಪರಿಣಾಮವಾಗಿ ಈಗಷ್ಟೆ ಉಚ್ಚ ನ್ಯಾಯಾಲಯದಲ್ಲಿ ಪ್ರತಿವಾದಿಯಾಗಿ ಅರ್ಜಿ ಸಲ್ಲಿಸಿದೆ. ಆಸ್ಪತ್ರೆ ಸ್ಥಳವನ್ನು ಆಕ್ರಮಿಸಿರುವ ತಮಿಳು ಕಾಲನಿ ನಿವಾಸಿಗಳಿಗೆ ನಾಲ್ಕು ಬಾರಿ ಮನೆ ನಿರ್ಮಿಸಿಕೊಡಲಾಗಿದೆ. 1980ರಲ್ಲಿ ಮಂಡ್ಯ ಆಸ್ಪತ್ರೆ ವಿಸ್ತರಣೆಗಾಗಿ ಅಂದಿನ ಶಾಸಕ ಎಸ್.ಡಿ.ಜಯರಾಂ ಆಸ್ಪತ್ರೆ ಪಕ್ಕದ ತಮಿಳರಿಗಾಗಿ ಈಗಿನ ಹೆಬ್ಬಾಳದ ಬಳಿಯ ರೇಷ್ಮೆ ಇಲಾಖೆ ಬಳಿ 300 ಮನೆ ನಿರ್ಮಿಸಲಾಗಿತ್ತು. ಆದರೆ ಕಳಪೆ ಅದು ಎಂದು ತಮಿಳರು ಸ್ಥಳಾಂತರಗೊಳ್ಳಲು ನಿರಾಕರಿಸಿದರು. ತದನಂತರ ಈ ಮನೆಗಳು ಅನ್ಯರ ಪಾಲಾದವು. ಇವರು ಕಳಪೆ ಎಂದ ಮನೆಗಳು ನಲವತ್ತು ವರ್ಷವಾದರೂ ಇಂದಿಗೂ ಗಟ್ಟಿಮುಟ್ಟಾಗಿಯೆ ಇವೆ. ನಂತರ ಶ್ರೀನಿವಾಸಪುರ ಮರಕಾಡುದೊಡ್ಡಿ ಬಳಿ ಆಸ್ಪತ್ರೆ ಪಕ್ಕದ ತಮಿಳರಿಗಾಗಿ 300 ಮನೆಯನ್ನು 1989ರಲ್ಲಿ ನಿರ್ಮಿಸಲಾಯಿತು. ಅಲ್ಲಿಗೂ ತೆರಳಲು ನಿರಾಕರಿಸಿದ್ದಾರೆ. 1991ರಲ್ಲಿ ಹಾಲಹಳ್ಳಿಯಲ್ಲಿ 500 ಮನೆ ನಿರ್ಮಿಸಲಾಯಿತ್ತಾದರೂ ಅಲ್ಲಿಗೆ ತೆರಳದೆ ಜಿಲ್ಲೆಯ ಅಭಿವೃದ್ದಿಗೆ ಅಡ್ಡಗಾಲಾಗಿದ್ದಾರೆ. ಇದೀಗ ನಾಲ್ಕನೆ ಬಾರಿ ನಗರದ ವಿವೇಕಾನಂದ ಬಡಾವಣೆಯ ಬೈಪಾಸ್‌ಗೆ ಹೊಂದಿಕೊಂಡಂತೆ ನಿರ್ಮಿಸಿರುವ ಮನೆಗಳಿಗೆ ತೆರಳದೆ ಹಠ ಹಿಡಿದು ಮಂಡ್ಯ ಮೆಡಿಕಲ್ ಕಾಲೇಜು ಅಭಿವೃದ್ಧಿ ವಿಸ್ತರಣೆಗೆ ಅಡೆತಡೆಯಾಗಿದ್ದಾರೆ. ತಕ್ಷಣ ತಮಿಳು ಕಾಲೋನಿ ಸೇರಿದಂತೆ ಸಂಪೂರ್ಣ ಒತ್ತುವರಿ ತೆರವುಗೊಳಿಸಬೇಕು. ಉಳಿದ ಒತ್ತುವರಿದಾರರಿಗೆ ನೋಟಿಸ್ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ರೈತ ಹೋರಾಟಗಾರ್ತಿ ಸುನಾಂದ ಜಯರಾಂ, ಕರುನಾಡ ಸೇವಕರ ಸಂಘಟನೆ ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಜೈ ಕರ್ನಾಟಕ ಪರಿಷತ್ ಅಧ್ಯಕ್ಷ ಎಸ್.ನಾರಾಯಣ್, ಕೆಆರ್‌ಎಸ್ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ್‌ಗೌಡ, ರೈತ ಸಂಘದ ಮುದ್ದೇಗೌಡ, ಕನ್ನಡಿಗರ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕನ್ನಡ ಪ್ರಕಾಶ್, ಕರುನಾಡ ಸೇವಕರ ಸಂಘದ ರಾಜ್ಯಾಧ್ಯಕ್ಷ ಲೋಕೇಶ್‌ಗೌಡ, ಕರವೇ ರಾಜ್ಯಾಧ್ಯಕ್ಷ ಶಿವರಾಮೇಗೌಡ, ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಎಂ.ಡಿ.ವೆಂಕಟೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net