ರೈತರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಒತ್ತಾಯಿಸಿ ಪ್ರತಿಭಟನೆ

9HSN1
Published on

ಹಾಸನ: ಎತ್ತಿನಹೊಳೆ ಯೋಜನೆಗೆ ಭೂಮಿ ನೀಡಿರುವ ಬೇಲೂರು ತಾಲೂಕಿನ ರೈತರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ಅಡಗೂರು ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಕಲ್ಪಿಸಬೇಕೆಂಬ ಉದ್ದೇಶದಿಂದ ಸಾವಿರಾರು ರೈತರು ಸ್ವಇಚ್ಛೆಯಿಂದ ಭೂಮಿ ನೀಡಿದ್ದೇವೆ. ಆಲೂರು-ಬೇಲೂರು ತಾಲೂಕು ವ್ಯಾಪ್ತಿಯಲ್ಲಿ 2,756 ಎಕರೆ ಜಮೀನು ಬಿಟ್ಟುಕೊಡಲಾಗಿದೆ. ಆದರೆ, ಇಲ್ಲಿವರೆಗೆ ಸೂಕ್ತ ಪರಿಹಾರ ನೀಡಿಲ್ಲ. ಕೃಷಿ ನಂಬಿಕೊಂಡು ಬದುಕುತ್ತಿದ್ದ ಕುಟುಂಬಗಳು ಸರ್ಕಾರದ ನಿರ್ಲಕ್ಷೃದಿಂದ ಬೀದಿಗೆ ಬಿದ್ದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಡ ರೈತರಿಗೆ ಹಣದ ಆಮಿಷವೊಡ್ಡಿ ಮಧ್ಯವರ್ತಿಗಳ ಮೂಲಕ ಜಮೀನು ಖರೀದಿಗೆ ಮುಂದಾಗಿದ್ದಾರೆ. ಇದುವರೆಗೆ ಅಲ್ಪಸ್ವಲ್ಪ ಬೆಳೆ ಪರಿಹಾರ ತಲುಪಿಸಿದ್ದಾರೆ. ಯಾವ ಅನುಪಾತದಲ್ಲಿ ಪರಿಹಾರ ನೀಡಬೇಕೆಂಬ ಅಂತಿಮ ನಿರ್ಧಾರವನ್ನೂ ಇದುವರೆಗೆ ತೆಗೆದುಕೊಂಡಿಲ್ಲ. ಜಮೀನಿಗೆ ಭೇಟಿ ನೀಡುವ ಅಧಿಕಾರಿಗಳು ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಪ್ರತಿ ಎಕರೆಗೆ 70 ರಿಂದ 80 ಲಕ್ಷ ರೂ. ಬೆಲೆ ನಿಗದಿ ಮಾಡಬೇಕು. ಶೇ.25 ಭಾಗ ಜಮೀನು ಕಳೆದುಕೊಂಡಿರುವ ರೈತನಿಗೆ ಈ ಹಿಂದೆ ಘೋಷಿಸಿರುವ 5 ಲಕ್ಷ ರೂ. ಪ್ಯಾಕೇಜ್ ಅನ್ನು ವಿಸ್ತರಿಸಬೇಕು. ಜಮೀನು ಕಳೆದುಕೊಂಡ ರೈತನಿಗೆ ಸರ್ಕಾರದಿಂದ 4 ಎಕರೆ ಜಮೀನು ಮಂಜೂರು ಮಾಡಬೇಕು. ಸಂತ್ರಸ್ತರಿಗೆ ಮಾಸಿಕ 5 ಸಾವಿರ ರೂ. ಪಿಂಚಣಿ ನೀಡಬೇಕು. ಸಂತ್ರಸ್ತರು ವಿಧವೆಯಾಗಿದ್ದರೆ ಅಂತಹವರಿಗೆ ಮನೆ ಹಾಗೂ ಮಾಸಿಕ 5 ಸಾವಿರ ರೂ. ಗೌರವಧನ ಕಲ್ಪಿಸಬೇಕು. ಭೂಮಿ ನೀಡಿದ ರೈತ ಕುಟುಂಬದ ವಿದ್ಯಾವಂತ ಯುವಕ ಅಥವಾ ಯುವತಿಗೆ ಸರ್ಕಾರಿ ಉದ್ಯೋಗ ಕರುಣಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಆರ್.ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು. ಅಡಗೂರು ಗ್ರಾಮಸ್ಥರಾದ ಹಾಲಪ್ಪ, ಶಿವಕುಮಾರ್, ಕಿಟ್ಟೇಗೌಡ, ಠಾಕೂರ್ ಸಿಂಗ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net