ಜೂಜು ನಿಷೇಧಿಸಿ ಯುವಸಮೂಹ ಉಳಿಸಿ: ರೈತ ಸಂಘ ಏಕೀಕರಣ ಸಮಿತಿ ಪ್ರತಿಭಟನೆ

Protest to ban online gambling Mandya
Published on

ಮಂಡ್ಯ: ಆನ್‌ಲೈನ್ ಜೂಜು ನಿಷೇಧಕ್ಕೆ ಒತ್ತಾಯಿಸಿ ನಗರದಲ್ಲಿ ರೈತ ಸಂಘ ಏಕೀಕರಣ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಮಾತ್ರವಲ್ಲದೆ ಇಸ್ಪೀಟ್ ಆಡುವ ಮೂಲಕ ಅಣಕು ಪ್ರದರ್ಶನ ಮಾಡಲು ಮುಂದಾದಾಗ ಪೊಲೀಸರು ಅವಕಾಶ ನೀಡಲಿಲ್ಲ.

ಹಿಂದೆಲ್ಲ ಯುಗಾದಿ ಹಬ್ಬದ ಅಂಗವಾಗಿ ನಡೆಯುತ್ತಿದ್ದ ಇಸ್ಪೀಟ್ ಆಟವನ್ನು ನಿಷೇಧಿಸಲಾಗಿದೆ. ಅಂತೆಯೇ ಸಾರ್ವಜನಿಕ ಪ್ರದೇಶದಲ್ಲಿ ಇಸ್ಪೀಟ್ ಆಡದಂತೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಈ ಕ್ರಮ ಸ್ವಾಗತಾರ್ಹ. ಇಂತಹ ನಿಷೇಧ ಕ್ರಮದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ. ಆದರೆ ಇದೇ ರೀತಿಯ ದಿಟ್ಟ ಕ್ರಮವನ್ನು ಆನ್‌ಲೈನ್ ಜೂಜಾಟ, ಕ್ರಿಕೆಟ್ ಬೆಟ್ಟಿಂಗ್ ಹಾಗೂ ಗೇಮ್ ಆ್ಯಪ್‌ಗಳ ಮೇಲೆ ಏಕೆ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು.

ಐಪಿಎಲ್ ಬೆಟ್ಟಿಂಗ್, ಆನ್‌ಲೈನ್ ಜೂಜಾಟದಿಂದ ಯುವ ಸಮೂಹ ಹಾಳಾಗುತ್ತಿದೆ. ಆದಾಗ್ಯೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬದಲಿಗೆ ಆನ್‌ಲೈನ್ ಬೆಟ್ಟಿಂಗ್‌ಗೆ ಸರ್ಕಾರವೇ ಪ್ರೋತ್ಸಾಹ ನೀಡುತ್ತಿರುವುದು ದುರಂತ. ಆನ್‌ಲೈನ್ ಜೂಜಾಟ, ಐಪಿಎಲ್ ಬೆಟ್ಟಿಂಗ್ ವ್ಯಾಪಕವಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವವರೇ ಇಲ್ಲದಂತಾಗಿದೆ. ಪರಿಣಾಮ ಹಣ ಕಳೆದುಕೊಳ್ಳುವವರು ಬೇರೆ ದಾರಿಯಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜತೆಗೆ ಊರನ್ನು ಬಿಟ್ಟು ಹೋಗುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ರೈತರ ಆತ್ಮಹತ್ಯೆಗೆ ಬೆಳೆ ನಷ್ಟ ಮಾತ್ರ ಕಾರಣವಲ್ಲ. ಅವರ ಮಕ್ಕಳು ಬೆಟ್ಟಿಂಗ್ ದಂಧೆಗೆ ಸಿಲುಕಿ ಹಣ ಕಳೆದುಕೊಳ್ಳುತ್ತಿರುವ ಪರಿಣಾಮ ರೈತರ ಮೇಲೆ ಬೀಳುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಬೆಟ್ಟಿಂಗ್‌ನಿಂದ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ನಡೆದಿದೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಇಂತಹ ಬೆಟ್ಟಿಂಗ್ ಆ್ಯಪ್, ಜೂಜಾಟದ ಮೇಲೆ ಕಠಿಣ ಕ್ರಮ ಜಾರಿಗೊಳಿಸಬೇಕು. ಯುಗಾದಿ ಹಬ್ಬದ ಅಂಗವಾಗಿ ನಡೆಯುತ್ತಿದ್ದ ಇಸ್ಪೀಟ್ ಆಟ ನಿಲ್ಲಿಸಿದ ಮಾತ್ರಕ್ಕೆ ಎಲ್ಲವೂ ಸರಿ ಹೋದಂತಲ್ಲ. ಕೂಡಲೇ ಆನ್‌ಲೈನ್ ಬೆಟ್ಟಿಂಗ್ ನಿಷೇಧಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಸದಸ್ಯರಾದ ಇಂಡುವಾಳು ಚಂದ್ರಶೇಖರ್, ಶಂಭೂನಹಳ್ಳಿ ಸುರೇಶ್, ಸೊ.ಶಿ.ಪ್ರಕಾಶ್, ಶಿವಳ್ಳಿ ಚಂದ್ರು, ಸಂತೋಷ್‌ಗೌಡ, ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net