

ಬೇಲೂರು: ವಿವಿಧ ಬೇಡಿಕೆಗಳ ಈಡೇರಿಸುವುದರ ಜತೆಗೆ ತೋಳಲು ಭಾಗದಲ್ಲಿ ವಿದ್ಯುತ್ ಉಪ ಕೇಂದ್ರ ತೆರೆದು ಪವರ್ ಬ್ಯಾಂಕ್ ನಿರ್ಮಿಸುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದಲ್ಲದೆ, ಸೆಸ್ಕ್ ಕಚೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಭೋಗ ಮಲ್ಲೇಶ್ ಮಾತನಾಡಿ, ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆಯಿಂದ ರೈತರು ಕಂಗಾಲಾಗಿದ್ದಾರೆ. ಸತತವಾಗಿ ಮೂರು ಗಂಟೆ ವಿದ್ಯುತ್ ಕೊಡುತ್ತೇವೆ ಎನ್ನುತ್ತಾರೆ. ಆದರೆ ಸರಿಯಾಗಿ ವಿದ್ಯುತ್ ಕೊಡುವುದಿಲ್ಲ. ಈಗಾಗಲೇ ತಾಲೂಕಿನಲ್ಲಿ ಕಾಡಾನೆಗಳ ಸಮಸ್ಯೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಆದ್ದರಿಂದ ರಾತ್ರಿಯೂ ವಿದ್ಯುತ್ ಕೊಡಬೇಕು. 24 ಗಂಟೆಯೊಳಗೆ ಟ್ರಾನ್ಸ್‌ಫಾರ್ಮರ್ ಕೊಡಬೇಕೆಂಬ ನಿಯಮವಿದ್ದು, ಇದನ್ನು ಅಧಿಕಾರಿಗಳು ಸಮರ್ಪಕವಾಗಿ ಮಾಡುತ್ತಿಲ್ಲ. ಕೂಡಲೇ ಟ್ರಾನ್ಸ್‌ಫಾರ್ಮರ್ ಅನ್ನು ಬೇಲೂರಿನಲ್ಲೆ ಕೊಡುವಂತಾಗಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸ್ವಾಮಿಗೌಡ ಮಾತನಾಡಿ, ರೈತರಿಗೆ ವಿದ್ಯುತ್ ಬೆಂಬಿಡದ ಸಮಸ್ಯೆಯಾಗಿದೆ. ತಾಲೂಕಿನ ಚೀಕನಹಳ್ಳಿ ಭಾಗದ ತೊಳಲಿನಲ್ಲಿ ವಿದ್ಯುತ್ ಉಪ ಕೇಂದ್ರ ತೆರೆಯಬೇಕೆಂದು ಹಲವಾರು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ ಸಾಧ್ಯವಾಗಿಲ್ಲ. ಇಲ್ಲಿ ಇಂಜಿನಿಯರ್‌ಗಳೇ ಗುತ್ತಿಗೆದಾರರಾಗಿದ್ದಾರೆ. ಅವರಿಗೆ ರೈತರೇ ಸಹಕಾರ ನೀಡುತ್ತಿರುವುದರಿಂದ ಇಂಜಿನಿಯರ್‌ಗಳು ಯಾರ ಮಾತನ್ನೂ ಕೇಳುತ್ತಿಲ್ಲ. ಇದು ನಿಲ್ಲಬೇಕು ಎಂದು ಆಗ್ರಹಿಸಿದರು.
ಅರೇಹಳ್ಳಿ-ಸಕಲೆಶಪುರ ವಿದ್ಯುತ್ ಲೈನ್ ಆಗಬೇಕು. ರೈತರಿಗೆ ಸೂಕ್ತ ಪರಿಹಾರ ನೀಡಿದರೆ ಜಾಗ ಬಿಡಲು ಸಿದ್ಧರಿದ್ದಾರೆ. ಮಲೆನಾಡು ಭಾಗದಲ್ಲಿ ಕಾಫಿ ಬೆಳೆಗಾರರು ಮಾರ್ಚ್‌ನಲ್ಲಿ ಹೆಚ್ಚು ವಿದ್ಯುತ್ ಬಳಸುತ್ತಾರೆ. ಇಲ್ಲಿ 6 ಗಂಟೆ ವಿದ್ಯುತ್ ಕೊಡುತ್ತಾರೆ. ಅದರಲ್ಲೇ ನಾಲ್ಕರಿಂದ ಐದು ಬಾರಿ ವಿದ್ಯುತ್ ಕಡಿತಗೊಳಿಸಲಾಗುತ್ತದೆ. ಬಹುತೇಕ ರೈತರಿಗೆ ಎರಡು ಗಂಟೆ ಸಿಗುತ್ತೆ. ಇದರಿಂದ ಬೆಳೆಗೆ ನೀರು ಹೊಡೆಯಲು ಸಾಧ್ಯವಾಗುವುದಿಲ್ಲ. ಈಗ ಬೇಸಿಗೆಯಿದ್ದು, ನೀರು ಹೆಚ್ಚಾಗಿ ಬೇಕಿದೆ. 12 ಗಂಟೆ ವಿದ್ಯುತ್ ಕೊಡಲು ಮುಂದಾಗದಿದ್ದರೆ ನಮ್ಮ ಹೋರಾಟವನ್ನು ಮುಂದುವರಿಸಲಿದ್ದೇವೆ ಎಂದು ಎಚ್ಚರಿಸಿದರು.
ಕಾಫಿ ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಅದ್ದೂರಿ ಕುಮಾರ್ ಮಾತನಾಡಿ, ವಿದ್ಯುತ್ ಸಮಸ್ಯೆಗಾಗಿ ಹೋರಾಟ ಮಾಡಿದಾಗ ಅಧಿಕಾರಿಗಳು ಬಂದು ಭರವಸೆ ನೀಡಿ ಹೋಗುತ್ತಾರೆ. ಬೆಳೆಗಾರರಿಗೆ ಮಾರ್ಚ್‌ನಿಂದ ಮೂರು ತಿಂಗಳು ನೀರಿನ ಅವಶ್ಯಕತೆ ಇರುತ್ತದೆ. ಮನಸ್ಸಿಗೆ ಬಂದಂತೆ ವಿದ್ಯುತ್ ಕಡಿತಗೊಳಿಸುವುದರಿಂದ ಸಮಸ್ಯೆಯಾಗುತ್ತಿದೆ. ಬೀದಿ ದೀಪಗಳಿಲ್ಲದೆ ಕಾಡಾನೆಗಳ ದಾಳಿಗಳಾಗುತ್ತಿದ್ದು, ಇದಕ್ಕೆ ಸೆಸ್ಕ್ ಅಧಿಕಾರಿಗಳು ಕಾರಣರಾಗುತ್ತಿದ್ದಾರೆ. ಆದ್ದರಿಂದ ಹಗಲು-ರಾತ್ರಿ ಎನ್ನದೆ ಸಮರ್ಪಕವಾಗಿ ವಿದ್ಯುತ್ ಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಪಿ.ಕುಮಾರ್, ತಾಲೂಕು ಕಾರ್ಯದರ್ಶಿ ಬಸವರಾಜು, ಮುಖಂಡರಾದ ಪುಪ್ಪೇಗೌಡ, ಸಿ.ಎಚ್.ಮಹೇಶ್, ಕರ್ಕಿಹಳ್ಳಿ ರಮೇಶ್, ಬಿರಟೆಮನೆ ಸುರೇಶ್, ಗೆಮಡೇಹಳ್ಳಿ ಶ್ರೀನಿವಾಸ್, ರಮೆಶ್ ಸುವರ್ಣ, ರಾಜಸೇಖರ್, ಮಂಜುನಾಥ್, ಧರ್ಮೇಗೌಡ, ಜಿ.ಕೆ.ಕುಮಾರ್ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.