

ಉಡುಪಿ: ಕಟ್ಟಡ ನಿರ್ಮಾಣ ಸಮಗ್ರಿ ಬೆಲೆ 5 ವರ್ಷದಲ್ಲಿ 5 ಪಟ್ಟು ಹೆಚ್ಚಳವಾಗಿದ್ದರೂ ರಾಜ್ಯ ಸರ್ಕಾರ ಅಂಬೇಡ್ಕರ್ ವಸತಿ ಯೋಜನೆ ಫಲಾನುಭವಿಗಳಿಗೆ ನೀಡುವ ಅನುದಾನ ಮೊತ್ತವನ್ನು ಏರಿಕೆ ಮಾಡಿಲ್ಲ. ಹೀಗಾಗಿ ಮಾ.26ರಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಸಮತಾ ಸೈನಿಕ ದಳ ಜಿಲ್ಲಾಧ್ಯಕ್ಷ ವಿಶ್ವನಾಥ ಪೇತ್ರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇತ್ತೀಚೆಗೆ ಸುಮಾರು 600 ಚದರಡಿ ಮನೆ ನಿರ್ಮಾಣಕ್ಕೆ 9 ಲಕ್ಷ ರೂ. ವೆಚ್ಚವಾಗುತ್ತಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜಿಲ್ಲೆಯ ಎಸ್‌ಸಿ ಮತ್ತು ಎಸ್‌ಟಿ ಜನಾಂಗದವರು ಇಷ್ಟು ಮೊತ್ತ ಭರಿಸಲಾಗದೆ ಗುಡಿಸಲಿನಲ್ಲಿಯೇ ವಾಸಿಸುವ ಪರಿಸ್ಥಿತಿ ಇದೆ. ಸಚಿವ ಕೋಟ ಅವರು ಅಧಿಕಾರ ಪಡೆದ ಸಂದರ್ಭದಲ್ಲಿ ಅಂಬೇಡ್ಕರ್ ವಸತಿ ಯೋಜನೆಯಲ್ಲಿ 7 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ್ದರು. ಅದು ಕಾರ್ಯಗತವಾಗಿಲ್ಲ. 29 ಸಾವಿರ ಕೋಟಿ ರೂ. ಎಸ್‌ಸಿಪಿಟಿಸಿ ಅನುದಾನವನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡಲಾಗುತ್ತಿದ್ದು, ಇದರಿಂದ ದಲಿತ ಸಮುದಾಯಕ್ಕೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ಅಂಬೇಡ್ಕರ್ ಅವಾಸ್ ಯೋಜನೆ ಮನೆ ನಿರ್ಮಾಣಕ್ಕಾಗಿ 7 ಲಕ್ಷ ರೂ. ಸಹಾಯಧನ ನೀಡುವುದಾಗಿ ಅಧಿಕೃತವಾಗಿ ಘೋಷಿಸಿ ಅನುಷ್ಠಾನಕ್ಕಾಗಿ ಸಂಬಂಧಪಟ್ಟ ಗ್ರಾಪಂಗಳಿಗೆ ಕೂಡಲೇ ಆದೇಶ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯದರ್ಶಿ ವ್ನಿೇಶ್ ಬ್ರಹ್ಮಾವರ, ಪ್ರ.ಕಾ. ಶ್ರಿನಿವಾಸ ನಡೂರು, ಸುಬ್ರಹ್ಮಣ್ಯ, ಮಹಿಳಾ ಘಟಕ ಅಧ್ಯಕ್ಷೆ ಜ್ಯೋತಿ ಶಿರಿಯಾರ, ಭೀಮ ಆರ್ಮಿ ಅಧ್ಯಕ್ಷ ಪ್ರಕಾಶ್ ಹೇರೂರು ಉಪಸ್ಥಿತರಿದ್ದರು.