

ಮಂಡ್ಯ: ಬೇಡ ಜಂಗಮರ ಹೆಸರಿನಲ್ಲಿ ಮೀಸಲಾತಿಯನ್ನು ಕಬಳಿಸುತ್ತಿರುವ ವೀರಶೈವ ಜಂಗಮರ ಸಂವಿಧಾನ ವಿರೋಧಿ ಬೇಡಿಕೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಪರಿಶಿಷ್ಟ ಜಾತಿ-ಪಂಗಡಗಳ ಸುಳ್ಳು ಜಾತಿ ಪ್ರಮಾಣಪತ್ರಗಳ ಹೋರಾಟ ಸಮಿತಿ ಸೆ.19ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ವೆಂಕಟಗಿರಿಯಯ್ಯ ತಿಳಿಸಿದರು.
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಶಾಸನಬದ್ಧ ನ್ಯಾಯಾಂಗದ ಅಧಿಕಾರವನ್ನು ನೀಡಬೇಕು. ಸುಳ್ಳು ಜಾತಿ ಪ್ರಮಾಣ ಪತ್ರದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಲು ಪ್ರತೀ ಜಿಲ್ಲೆಯಲ್ಲೂ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಿ ವಿಶೇಷ ವಕೀಲರನ್ನು ನೇಮಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಶಾಲಾ ದಾಖಲೆಗಳಲ್ಲಿ 1ನೇ ತರಗತಿಯಲ್ಲಿ ಬೇಡ ಜಂಗಮ ಎಂದು ದಾಖಲಿಸಲು ಪ್ರಾರಂಭಿಸಿರುವುದರಿಂದ ಜಾತಿ ಸುಳ್ಳು ಎಂದು ತಿಳಿದುಬಂದಲ್ಲಿ ವಂಶವೃಕ್ಷವನ್ನು ತೆಗೆದುಕೊಂಡು ಪರಿಶೀಲಿಸಿ ಜಾತಿ ಪ್ರಮಾಣ ಪತ್ರವನ್ನು ಅಂಗೀಕರಿಸಬೇಕು. ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟವನ್ನು ರಚಿಸಿಕೊಂಡು ಮೀಸಲಾತಿ ಕಬಳಿಕೆಯ ಅಪರಾಧವನ್ನು ಮುಚ್ಚಿಹಾಕಲು ಸುಳ್ಳು ಹೋರಾಟ ಮಾಡುತ್ತಿರುವ ಪದಾಧಿಕಾರಿಗಳ ವಿರುದ್ಧ ಪ.ಜಾತಿ, ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ದಸಂಸ ಮುಖಂಡರಾದ ಅಂದಾನಿ, ಶಿವು, ಸಿದ್ದರಾಮಯ್ಯ, ಚಿಕ್ಕಯ್ಯ ಇದ್ದರು.