ಗುಜರಾತ್ ಸರ್ಕಾರದ ವಿರುದ್ದ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

Protest
Published on

ಮಂಡ್ಯ: ಗುಜರಾತ್‌ನಲ್ಲಿ ಸನ್ನಡತೆಯ ಹೆಸರಿನಲ್ಲಿ ಅತ್ಯಾಚಾರಿ ಪ್ರಕರಣದಲ್ಲಿ ಜೈಲಿನಲ್ಲಿದ್ದವರನ್ನು ಬಿಡುಗಡೆ ಮಾಡಿರುವುದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಪ್ರಗತಿಪರ ಸಂಘಟನೆಗಳಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಸಂಘಟನೆಗಳ ಪದಾಧಿಕಾರಿಗಳು, ಘೋಷಣೆಗಳನ್ನು ಕೂಗುತ್ತಾ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇನ್ನು ಡಿಸಿ ಕಚೇರಿವರೆಗೆ ಬಾರದಂತೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಅವುಗಳನ್ನು ತಳ್ಳುವ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು. ಆದರೂ ಪಟ್ಟು ಬಿಡದೇ ಬ್ಯಾರಿಕೇಡ್‌ಗಳನ್ನು ಬೇದಿಸಿ ಡಿಸಿ ಕಚೇರಿ ಆವರಣದಲ್ಲಿ ಧರಣಿ ನಡೆಸಲಾಯಿತು.
ಅಮೃತ ಮಹೋತ್ಸವದ ಆಚರಣೆಯ ದಿನ ಮಹಿಳೆಯರ ಘನತೆಯ ಬದುಕಿನ ಸ್ವಾತಂತ್ರೃವನ್ನು ಕಸಿದುಕೊಳ್ಳಲಾಗಿದೆ. ಅತ್ಯಾಚಾರಿಗಳಿಗೆ ಅಮೃತಕುಡಿಸಿ ಮಹಿಳೆಯರಿಗೆ ವಿಷ ಉಣಿಸುವ ಕೆಲಸ ಮಾಡಲಾಗಿದೆ. ಗುಜರಾತ್‌ನಲ್ಲಿ 2002ರಲ್ಲಿ ನಡೆದಿದ್ದ ನರಮೇಧ ಮತ್ತು ಸಾಮೂಹಿಕ ಅತ್ಯಾಚಾರದಂತಹ ಹೀನ ಕೃತ್ಯ ಎಸಗಿ ಅಪರಾಧ ಸಾಬೀತಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ಜನರನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಬಿಲ್ಕಿಸ್ ಬಾನು ಎಂಬಾಕೆ ನಡೆಸಿದ ಹೋರಾಟವನ್ನು ಮಣ್ಣು ಪಾಲು ಮಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸುನಂದಾ ಜಯರಾಂ, ದೇವಿ, ಸುಶೀಲಾ, ಲತಾ, ಸುನೀತಾ, ಶೋಭಾ, ಮಂಜುಳಾ, ಪ್ರಮೀಳಾ, ಹೂತಗೆರೆ ಜನಾರ್ಧನ್, ಟಿ.ಎಲ್.ಕೃಷ್ಣೇಗೌಡ, ರಾಮಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net