ಏಳನೇ ವೇತನ ಆಯೋಗದ ಸೌಲಭ್ಯಕ್ಕೆ ಆಗ್ರಹ

31 jlr
Published on

ಜಗಳೂರು: ಏಳನೇ ವೇತನ ಆಯೋಗದ ಲೆಕ್ಕಾಚಾರದ ಅನುಸಾರ ನಿವೃತ್ತ ನೌಕರರಿಗೆ ಡಿಸಿಆರ್​ಜಿ ಕಮ್ಯುಟೇಶನ್, ಗಳಿಕೆ ರಜೆ ನಗದೀಕರಣಗಳ ನಿವೃತ್ತಿ ಆರ್ಥಿಕ ಸೌಲಭ್ಯ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆಯಿಂದ ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ತಾಲೂಕು ಕಚೇರಿಗೆ ಆಗಮಿಸಿದ ನಿವೃತ್ತ ನೌಕರರು ಸರ್ಕಾರದ ವಿರುದ್ಧ ಘೊಷಣೆ ಕೂಗಿದರು. ನಂತರ ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಅವರಿಗೆ ಮನವಿ ಸಲ್ಲಿಸಿದರು.

2022ರ ಜು.1 ರಿಂದ 2024 ರ ಜು.31 ಅವಧಿಯಲ್ಲಿ ನಿವೃತ್ತರಾದ ನಮಗೆ 6 ನೇ ವೇತನ ಆಯೋಗದ ಲೆಕ್ಕಾಚಾರದ ಅನುಸಾರ ಡಿಸಿಆರ್​ಜಿ ಕಮ್ಯುಟೇಶನ್, ಗಳಿಕೆ ರಜೆ ನಗದೀಕರಣಗಳ ನಿವೃತ್ತಿ ಆರ್ಥಿಕ ಸೌಲಭ್ಯ ನೀಡಿದ್ದು, ಇದರಿಂದ ಆರ್ಥಿಕ ನಷ್ಟ ಉಂಟಾಗಿ ಅನ್ಯಾಯವಾಗಿದೆ ಎಂದು ದೂರಿದರು.

ಬೆಳಗಾವಿಯ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ 20 ಸಾವಿರಕ್ಕೂ ಅಧಿಕ ನೌಕರರು ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಸಭೆ ಕರೆದು ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಈವರೆಗೂ ಸಭೆ ಏರ್ಪಡಿಸಿ ಅಹವಾಲು ಆಲಿಸಿಲ್ಲ ಎಂದು ಸಂಘದ ಗೌರವ ಸಂಚಾಲಕ ಎನ್.ಬಾಬುರೆಡ್ಡಿ ದೂರಿದರು.

7 ನೇ ವೇತನ ಆಯೋಗದಲ್ಲಿ 12 ರಿಂದ 22 ಲಕ್ಷ ರೂ. ಆರ್ಥಿಕ ನಷ್ಟ ಉಂಟಾಗಿ ಅನ್ಯಾಯಕ್ಕೆ ಒಳಗಾಗಿದ್ದೇವೆ. ಆದ್ದರಿಂದ ಬೇಡಿಕೆ ಪರಿಗಣಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ವೇದಿಕೆಯ ಘಟಕ ಮುಖ್ಯ ಸಂಚಾಲಕ ಎಚ್. ಗುರಪ್ಪ, ಸಂಚಾಲಕ ಕಾರ್ಯದರ್ಶಿ ಎ. ಜಗನಾಥ್​ರೆಡ್ಡಿ, ಜಿಲ್ಲಾ ಸಂಚಾಲಕ ಅರ್ಜುನಪ್ಪ, ಗೌ.ಸಂಚಾಲಕ ಪಿ. ಶಿವಣ್ಣ, ಪದಾಧಿಕಾರಿಗಳಾದ ಡಿ. ತಿಪ್ಪೇಸ್ವಾಮಿ, ಡಿ.ಬಿ. ಬಸಪ್ಪ, ಎಂ.ಜಿ. ಪಂಪಾಪತಿ, ಎಚ್.ಸಿ. ಕಾಟಪ್ಪ, ಜಿ. ವೆಂಕಟೇಶ್, ಎ.ಎನ್. ರೇವತಿ, ಜಯ್ಯಮ್ಮ, ಜಿ. ಮಂಜಪ್ಪ, ಮುಜಿಬುಲ್ಲಾ ಖಾನ್, ಪಿ. ಈಶ್ವರಪ್ಪ, ಎಸ್. ಪ್ರಕಾಶ್, ಬುಳ್ಳಪ್ಪ, ವಿರೂಪಾಕ್ಷ ರೊಟ್ಟಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net