ಹೆಸ್ಕಾಂ ಕಚೇರಿ ಎದುರು ರೈತನ ಶವವಿಟ್ಟು ಪ್ರತಿಭಟನೆ

Protest Infront of Hescom Office
Published on

ಬ್ಯಾಡಗಿ: ವಿದ್ಯುತ್ ತಂತಿ ತುಳಿದು ಮೃತಪಟ್ಟ ರೈತನ ಶವವನ್ನು ಪಟ್ಟಣದ ಹೆಸ್ಕಾಂ ಕಚೇರಿ ಎದುರು ರೈತರು, ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.

ಗ್ರಾಪಂ ಸದಸ್ಯ, ವಕೀಲ ಬಸವರಾಜ ಬನ್ನಿಹಟ್ಟಿ ಮಾತನಾಡಿ, ಕಳೆದ ನಾಲ್ಕು ವರ್ಷದಿಂದ ವಿದ್ಯುತ್ ಬಾಗಿ ನಿಂತಿದ್ದು, ಅಪಾಯಕಾರಿಯಾಗಿರುವುದನ್ನು ಹೆಸ್ಕಾಂ ಸಿಬ್ಬಂದಿ ಗಮನಕ್ಕೆ ತರಲಾಗಿತ್ತು. ಅಲ್ಲದೆ, ಅರ್ಜಿ ಕೊಟ್ಟರೂ ಈವರೆಗೂ ಸ್ಪಂದಿಸಿಲ್ಲ. ಗ್ರಾಮಸಭೆಯಲ್ಲಿ ಈ ಕುರಿತು ವರದಿ ನೀಡಿದ್ದೇವೆ. ಆದರೂ ಸಂಬಂಧಿಸಿದ ಸೆಕ್ಸನ್ ಆಫೀಸರ್ ರವಿ ಎಚ್.ಕೆ. ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೆಸ್ಕಾಂ ಸಿಬ್ಬಂದಿ ರೈತರೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ. ಇಂತಹ ಅಧಿಕಾರಿಗಳು ನಮಗೆ ಬೇಡವೇ ಬೇಡ. ಬುಧವಾರ 10 ಗಂಟೆಯೊಳಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಮಾನತು ಮಾಡಬೇಕು. ಇಲ್ಲವಾದರೆ, ಗುರುವಾರ ತಾಲೂಕಿನ ರೈತ ಸಂಘದ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸುತ್ತೇವೆ. ಮೃತ ರೈತನ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡುವರೆಗೂ ಶವ ಒಯ್ಯುವುದಿಲ್ಲ ಎಂದು ಪಟ್ಟು ಹಿಡಿದರು.

ಪರಿಹಾರದ ಭರವಸೆ: ಕೆಲ ಹೊತ್ತಿನಲ್ಲಿ ಪ್ರತಿಭಟನಾಕಾರರ ಬಳಿ ಆಗಮಿಸಿದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜು ಅರಳಿಕಟ್ಟಿ, ರೈತರ ಕ್ಷಮೆ ಕೇಳಿದರು. ನಂತರ ಮಾತನಾಡಿ, ನನಗೂ ರೈತರ ನೋವು ಗೊತ್ತಿದೆ. ಈ ದುಃಖದಲ್ಲಿ ನಾನು ಭಾಗಿಯಾಗುವೆ. ವಿದ್ಯುತ್ ತಂತಿ ಸಮಸ್ಯೆ ನನ್ನ ಗಮನಕ್ಕೆ ಬಂದಿಲ್ಲ. ಈ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮೇಲಧಿಕಾರಿಗಳಿಗೆ ವರದಿ ಕಳುಹಿಸುತ್ತೇನೆ. ಮೃತಪಟ್ಟ ರೈತನ ಕುಟುಂಬಕ್ಕೆ ನ್ಯಾಯ ಕೊಡಿಸಲು ಪ್ರಕರಣ ದಾಖಲಿಸಿಕೊಂಡು, ಹೆಸ್ಕಾಂ ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹಾರ ವಿತರಿಸಲು ಪ್ರಾಮಾಣಿಕ ಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆಯಿಂದ ಗ್ರಾಮಸ್ಥರು ಹಿಂದೆ ಸರಿದರು. ಈ ವೇಳೆ ಪೋಲಿಸರು ಭದ್ರತೆ ಒದಗಿಸಿದ್ದರು.

ವಕೀಲ ಪ್ರಕಾಶ ಬನ್ನಿಹಟ್ಟಿ, ಗಂಗಣ್ಣ ಎಲಿ, ಮಹದೇವಪ್ಪ ಶಿಡೇನೂರು, ಕಿರಣ ಗಡಿಗೋಳ, ನಿಂಗಪ್ಪ ಮಾಸಣಗಿ, ಶಿವು ಕಲ್ಲಾಪುರ, ಶಶಿ ಮಠದ, ಮಲ್ಲೇಶ ಎಂ.ಎನ್. ಶಶಿಧರ ದೊಡ್ಡಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net