

ಪಾವಗಡ : ತುಮಕೂರು ಜಿಲ್ಲೆಯಾದ್ಯಂತ ಮಾದಿಗ ಸಮುದಾಯಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ ಹೆಚ್ಚಾಗುತ್ತಿದ್ದು, ಜಾತಿ ದೌರ್ಜನ್ಯ ಖಂಡಿಸಿ ಸೆ.24ರಂದು ಮಧುಗಿರಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಅಧ್ಯಕ್ಷ ಕೇಶವ ಮೂರ್ತಿ ತಿಳಿಸಿದರು.
ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಸೋಮವಾರ ಮಾದಿಗ ಸ್ವಾಭಿಮಾನಿ ಸಂಘಟನೆ ಒಕ್ಕೂಟ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ದಿನೇದಿನೆ ದಲಿತರ ಮತ್ತು ಶೋಷಿತ ವರ್ಗಗಳ ಮೇಲೆ ಮೇಲ್ವರ್ಗದವರಿಂದ ಹಲ್ಲೆ ಪ್ರಕರಣಗಳು ನಡೆಯುತ್ತಿವೆ. ಮೂರು ದಿನಗಳ ಹಿಂದೆ ಪಾವಗಡ ತಾಲೂಕಿನ ಬೆಳ್ಳಿಬಟ್ಟು ಗ್ರಾಮದಲ್ಲಿ ನಾಯಕ ಜನಾಂಗದ ವಾಲ್ಮೀಕಿ ಎಂಬುವರು ಮಗು ದ್ವಿಚಕ್ರವಾಹನಕ್ಕೆ ಅಡ್ಡ ಬಂತು ಎಂದು ಮಗುವಿನ ಕುಟುಂಬದವರ ಮೇಲೆ ಹಲ್ಲೆ ಮಾಡಿ, ಮಗುವಿನ ಅಜ್ಜನನ್ನು ಹತ್ಯೆ ಮಾಡಿರುವ ಬಗ್ಗೆ ದೂರು ದಾಖಲಾಗಿದೆ. ಮಧುಗಿರಿ ತಾಲೂಕಿನ ಪೋಲೇನಹಳ್ಳಿಯಲ್ಲಿ ನೀರಿನ ವಿಚಾರಕ್ಕೆ ಪ್ರಶ್ನೆ ಮಾಡಿದ ಮಾದಿಗ ಜನಾಂಗದ ಆನಂದ ಎಂಬಾತನನ್ನು ಬಿಲ್ ಕಲೆಕ್ಟರ್ ನಾಗೇಶ್ ವಾಹನ ನುಗ್ಗಿಸಿ ಕೊಲೆ ಮಾಡಿದ್ದರು. ಈ ಎಲ್ಲ ಟನೆಗಳನ್ನು ಖಂಡಿಸಿ ಸೆ.24 ರಂದು ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ಪಾವಗಡ ತಾಲೂಕು ದಲಿತ ಮುಖಂಡರಾದ ಕನ್ನಮೆಡಿ ಕೃಷ್ಣಮೂರ್ತಿ, ಮಂಗಳವಾಡ ಮಂಜಣ್ಣ, ದೇವಲಕೆರೆ ನಿಂಗಣ್ಣ, ಉಮೇಶ್ ಬೆಳ್ಳಿಬಟ್ಲು, ಮಾದಿಗ ದಂಡೋರ ತಾಲೂಕು ಅಧ್ಯಕ್ಷ ಹನುಮಂತರಾಯಪ್ಪ, ಕಡಪಲಕೆರೆ ನರಸಿಂಹಪ್ಪ, ಶೈಲಾಪುರ ನಾಗರಾಜು ಇತರರು ಇದ್ದರು.