

ನೆಲಮಂಗಲ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಹೆಸರು ಬದಲಿಸಿರುವ ರಾಜ್ಯ ಸರ್ಕಾರ ಕೂಡಲೇ ನಿರ್ಧಾರ ಹಿಂಪಡೆಯಬೇಕು, ಇಲ್ಲದಿದ್ದರೆ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಾಂತರ ಜಿಲ್ಲೆ ಉಳಿವಿಗಾಗಿ ಹೋರಾಟ ಸಮಿತಿ ಹೋರಾಟ ಸಮಿತಿ ಅಧ್ಯಕ್ಷ ಜಿ.ಉಮೇಶ್ಗೌಡ ಎಚ್ಚರಿಕೆ ನೀಡಿದರು.
ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ 4 ತಾಲೂಕು ಒಳಗೊಂಡಿದ್ದು, ಇತಿಹಾಸ ಹೊಂದಿದೆ. ಜತೆಗೆ ಗ್ರಾಮೀಣ ಪ್ರದೇಶ ಹಾಗೂ ಹಳ್ಳಿಗಳನ್ನು ಹೊಂದಿದ್ದು, ಸರ್ಕಾರ ನಗರೀಕರಣ ಮಾಡುವ ನಿಟ್ಟಿನಲ್ಲಿ ಜಿಲ್ಲೆ ಹೆಸರನ್ನು ಬದಲಾಯಿಸಿದೆ. ನಗರೀಕರಣ ಮಾಡಿದಲ್ಲಿ ಗ್ರಾಮಾಂತರ ಜಿಲ್ಲೆ ಸತ್ವ ಹಾಗೂ ಹಳ್ಳಿಯ ಸೊಗಡು ಕಣ್ಮರೆಯಾಗುತ್ತದೆ. ದಾಖಲೆಗಳ ಬದಲಾವಣೆಗೆ ಜನರು ನಿತ್ಯ ಅಲೆದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ಹೆಸರು ಬದಲಾವಣೆ ಖಂಡಿಸಿ ಜು.18ರಂದು ಬೆಳಗ್ಗೆ 10.30ಕ್ಕೆ ಹೋರಾಟ ಸಮಿತಿ ನೇತೃತ್ವದಲ್ಲಿ ನಗರ ಸೇರಿ ತಾಲೂಕಿನ ಹಲವು ಸಂಟನೆಗಳ ಪದಾಧಿಕಾರಿಗಳು ನಗರದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
ಹೋರಾಟ ಸಮಿತಿ ಉಪಾಧ್ಯಕ್ಷ ಗಂಗಬೈಲಪ್ಪ ಮಾತನಾಡಿ, ಸರ್ಕಾರ ರಾಜಕೀಯ ಪ್ರತಿಷ್ಠಿತೆಗಾಗಿ ಜಿಲ್ಲೆ ಹೆಸರು ಬದಲಾವಣೆ ಮಾಡಿರುವುದು ಸರಿಯಲ್ಲ. ಗ್ರಾಮಾಂತರ ಹೆಸರಿನಲ್ಲಿ ಜಿಲ್ಲೆಯನ್ನು ಮುಂದುವರಿಸಬೇಕು. ಜತೆಗೆ ಸರ್ಕಾರ ಸುಸಜ್ಜಿತ ಜಿಲ್ಲಾಸ್ಪತ್ರೆ, ಶಾಶ್ವತ ಕುಡಿಯುವ ನೀರು, ವೈದ್ಯಕಿಯ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಸೇರಿ ಹಲವು ಮಹತ್ತರ ಕಾರ್ಯಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರಚಾರ ಸಮಿತಿ ಅಧ್ಯಕ್ಷ ಎನ್.ಆರ್.ನಾಗರಾಜು, ಪ್ರಧಾನ ಕಾರ್ಯದರ್ಶಿ ಆನಂದ್.ವೈ.ಮೌರ್ಯ, ಪದಾಧಿಕಾರಿಗಳಾ ಅರುಣ್ ಕುಮಾರ್, ಮಂಜೇಶ್, ವಿಜಯ್ಕುಮಾರ್, ಮುಖಂಡ ಪ್ರಸನ್ನಕುಮಾರ್, ಗುರುಪ್ರಸಾದ್ ಇತರರು ಇದ್ದರು.