

ವಿಜಯವಾಣಿ ಸುದ್ದಿಜಾಲ ಧಾರವಾಡ
ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನ. 9ರಂದು ಬೃಹತ್ ಪ್ರತಿಭಟನೆ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಕಲ್ಮೇಶ ಲಿಗಾಡೆ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಕಬ್ಬಿಗೆ ಪ್ರತಿ ಟನ್‌ಗೆ 4 ಸಾವಿರ ರೂ. ಬೆಲೆ ನಿಗದಿ, ಕಬ್ಬಿಗೂ ವಿಮೆ ಜಾರಿ, ರೈತರ ಪಂಪಸೆಟ್‌ಗೆ ಹಗಲು 8 ತಾಸು ತ್ರಿಫೇಸ್ ವಿದ್ಯುತ್, ಕಾಳಿ ನದಿಯಿಂದ ಧಾರವಾಡ ಜಿಲ್ಲೆಗೆ ನೀರು ಪೂರೈಸಬೇಕು ಎಂದು ಆಗ್ರಹಿಸಿದರು.
ಬರಗಾಲದಿಂದ ಮುಂಗಾರಿ ಮತ್ತು ಹಿಂಗಾರಿಯಿಂದ ತತ್ತರಿಸಿದ ರೈತರಿಗೆ ಪ್ರತಿ ಎಕರೆಗೆ 40,000ರೂ. ಪರಿಹಾರ, ಬೆಳೆ ವಿಮೆ ಕೂಡಲೆ ನೀಡಬೇಕು. ಎಲ್ಲ ಬೆಳೆಗಳಿಗೆ ಎಂಎಸ್‌ಪಿ ಜಾರಿ ಮಾಡಬೇಕು. ತೋಟಗಾರಿಕೆ ಬೆಳೆಗಳಿಗೆ ಮಾವು ಮತ್ತು ಹೂವಿಗೆ ಕೂಡಲೇ ಪರಿಹಾರ ನೀಡಬೇಕು. ಪ್ರತಿ ಗ್ರಾಮದಲ್ಲಿ ಜಾನುವಾರುಗಳಿಗೆ ಉತ್ತಮ ನೀರು, ಮೇವು ನೀಡಬೇಕು ಎಂದು ಆಗ್ರಹಿಸಿದರು.
ರೈತ ಕೂಲಿ ಕಾರ್ಮಿಕರ ಹಾಗೂ ಕೂಲಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಹಿಂದಿನ ಯೋಜನೆಗಳನ್ನು ಜಾರಿಗೊಳಿಸುವುದು, ಸರ್ಕಾರದಿಂದ ನೀಡುವ ಎಲ್ಲ ರೀತಿಯ ಆಶ್ರಯ ಯೋಜನೆ, ಮನೆಗಳನ್ನು ಹಾಗೂ ಈ ಹಿಂದೆ ಬಿದ್ದ ಮನೆಗಳಿಗೆ ಪರಿಹಾರ ನೀಡಬೇಕು ಸೇರಿ ಇತರ ಪ್ರಮುಖ ಬೇಡಿಕೆ ಈಡೇರಿಸುವಂತೆ ಆಗ್ರಹಿಸಲಾಗುವುದು ಎಂದರು.
ಚಂದ್ರಶೇಖರ ಕಲ್ಕೂರ, ಅಮೃತ ಕಮ್ಮಾರ, ರಮೇಶ ಕಿತ್ತೂರ, ಮಾರುತಿ ಸುಂಕದ, ಇತರರು ಇದ್ದರು.