29 ರಂದು ನಬಾರ್ಡ್ ರೈತ ವಿರೋಧಿ ನೀತಿ ಖಂಡಿಸಿ ಧರಣಿ

23 CRP-1A
Published on

ಚನ್ನರಾಯಪಟ್ಟಣ : ರೈತರಿಗೆ ಸಾಲ ಕಡಿತ ಮಾಡಿರುವ ನಬಾರ್ಡ್ ನೀತಿ ವಿರೋಧಿಸಿ ಹಾಗೂ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗಟ್ಟಲು ಬೆಂಗಳೂರಿನ ರಿಸರ್ವ್ ಬ್ಯಾಂಕ್ ಇಂಡಿಯಾ (ಆರ್‌ಬಿಐ)ಕಚೇರಿ ಎದುರು ಜ.29ರಂದು ಬೆಳಗ್ಗೆ 11ಗಂಟೆಗೆ ರೈತರಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರಘು ಹೇಳಿದರು.

ಕೃಷಿ ಕ್ಷೇತ್ರವನ್ನು ಸದೃಢಪಡಿಸುವ ದೃಷ್ಟಿಯಿಂದ ಆರ್ಥಿಕ ನೆರವು ನೀಡಲು ಸ್ಥಾಪನೆಯಾಗಿರುವ ನಬಾರ್ಡ್ ಮೂಲಕ ಕೃಷಿಗೆ ನೀಡುತ್ತಿದ್ದ ಅಲ್ಪಾವಧಿ ಸಾಲದ ಮೊತ್ತವನ್ನು ಕಡಿತಗೊಳಿಸಲಾಗಿದೆ. ಇದರಿಂದ ರೈತರ ಮೇಲೆ ಹೊಡೆತ ಬೀಳಲಿದೆ. ರೈತರು ಹೆಚ್ಚು ಬಡ್ಡಿ ತೆತ್ತು, ಮೈಕ್ರೋ ಫೈನಾನ್ಸ್ ಹಾಗೂ ವಾಣಿಜ್ಯ ಬ್ಯಾಂಕುಗಳ ಮೊರೆ ಹೋಗಬೇಕು, ಇಲ್ಲವೇ ಖಾಸಗಿ ಸಾಲದ ಸುಳಿಗೆ ಸಿಕ್ಕಿ ಹಾಕಿಕೊಳ್ಳಬೇಕು. ಈ ಸುಳಿಗೆ ರೈತ ಸಮುದಾಯ ಬಲಿಯಾದಾಗ ಸ್ಥಿರಾಸ್ತಿಗಳು ಹರಾಜಾಗುತ್ತವೆ, ಇದರಿಂದ ರೈತರು ಸರಣಿ ಆತ್ಮಹತ್ಯೆ ದಾರಿ ತುಳಿಯುತ್ತಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಕಿಡಿಕಾರಿದರು.

ನಬಾರ್ಡ್ ಕಳೆದ ವರ್ಷ ನಮ್ಮ ರಾಜ್ಯಕ್ಕೆ 5600 ಕೋಟಿ ರೂ. ನೀಡಿತ್ತು. ಈ ವರ್ಷ ಕೇವಲ 2340 ಕೋಟಿ ರೂ.ಗಳನ್ನು ನೀಡಿದೆ. ಇದರಿಂದಾಗಿ 5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ನೀಡುತ್ತಿದ್ದ ಅಲ್ಪಾವಧಿ ಸಾಲಕ್ಕೆ ಕುತ್ತು ಬಂದಿದೆ. ಮತ್ತು ರಿಯಾಯತಿ ದರದಲ್ಲಿ 15 ಲಕ್ಷ ರೂ.ಗಳ ವರೆಗೆ ದೊರೆಯುತ್ತಿದ್ದ, ಮಧ್ಯಮ ಅವಧಿ ಮತ್ತು ದೀರ್ಘಾವಧಿ ಕೃಷಿ ಸಾಲಕ್ಕೂ ಹೊಡೆತ ಬೀಳುತ್ತದೆ. ಶೂನ್ಯ ಬಡ್ಡಿ ದರದಲ್ಲಿ ಸುಮಾರು 30 ಲಕ್ಷ ರೈತರು ಪಡೆಯುತ್ತಿದ್ದ ಸಾಲ ನಿಂತು ಹೋಗುತ್ತದೆ. ಇದರಿಂದ, ರಾಜ್ಯದಲ್ಲಿರುವ ಹಲವಾರು ಡಿಸಿಸಿ ಬ್ಯಾಂಕ್‌ಗಳು, ಭೂ ಅಭಿವೃದ್ಧಿ ಬ್ಯಾಂಕ್‌ಗಳು, ಪತ್ತಿನ ಸಹಕಾರ ಸಂಘಗಳು, ಭವಿಷ್ಯದಲ್ಲಿ ಸಂಪೂರ್ಣವಾಗಿ ಮುಚ್ಚುವ ಪರಿಸ್ಥಿತಿ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎಂ.ಎಲ್. ಹರೀಶ್ ಮಾತನಾಡಿ, ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಹಾವಳಿ ಮತ್ತು ಕಿರುಕುಳದಿಂದ ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ಇತರ ದುಡಿಯುವ ಜನ ಸಂಕಷ್ಟಕ್ಕೀಡಾಗಿದ್ದಾರೆ. ಮೈಕ್ರೋ ಫೈನಾನ್ಸ್ ಮೇಲೆ ಯಾರಿಗೂ ಹಿಡಿತ ಇಲ್ಲದಂತಾಗಿ ಕೆಲ ಮಹಿಳೆಯರು ಮಾನ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನೂ ಕೆಲವು ಕಿರುಕುಳ ತಾಳಲಾರದೆಯೇ ಊರು ತೊರೆಯುತ್ತಿದ್ದಾರೆ. ಈ ಮೈಕ್ರೋ ಫೈನಾನ್ಸ್‌ಗಳ ಹಾವಳಿ ತಡೆಗಟ್ಟಲೇ ಬೇಕಾಗಿದೆ. ಸಹಕಾರಿ ಕ್ಷೇತ್ರವನ್ನು ಉಳಿಸುವ ಹಾಗೂ ಕೇಂದ್ರ ಸರ್ಕಾರದ ಹುನ್ನಾರವನ್ನು ಹಿಮ್ಮೆಟ್ಟಿಸುವ ಉದ್ದೇಶದಿಂದ ಜ.29 ರಂದು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ರಿಸರ್ವ್ ಬ್ಯಾಂಕ್ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ತಾಲೂಕಿನ ಸಾವಿರಾರು ಸಂಖ್ಯೆಯಲ್ಲಿ ರೈತರು, ಎಲ್ಲ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಮತ್ತು ಷೇರುದಾರರು ಭಾಗವಹಿಸಬೇಕೆಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ರಾಮಚಂದ್ರ, ಮಹಿಳಾ ಅಧ್ಯಕ್ಷರಾದ ಕಾಮಾಕ್ಷಮ್ಮ, ತಾಲೂಕು ಕಾರ್ಯದರ್ಶಿ ಮಂಜೇಗೌಡ ಅಡಗೂರು, ರೈತ ಮುಖಂಡ ಕುಮಾರ್ ಹೊಸೂರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net