ವಸತಿ ಯೋಜನೆಯಡಿ ಮುಸ್ಲಿಮರಿಗೆ ಮೀಸಲಾತಿ ಖಂಡಿಸಿ 25ಕ್ಕೆ ಪ್ರತಿಭಟನೆ

rastra bhaktara balaga
Published on

ಶಿವಮೊಗ್ಗ: ವಸತಿ ಯೋಜನೆಯಡಿ ನಿರ್ಮಾಣ ಆಗುವ ಮನೆಗಳಲ್ಲಿ ಮುಸ್ಲಿಮರಿಗೆ ಶೇ.15ರಷ್ಟು ಮೀಸಲಾತಿ ನೀಡಲು ಮುಂದಾಗಿರುವ ಸಚಿವ ಸಂಪುಟದ ತೀರ್ಮಾನ ಖಂಡಿಸಿ ರಾಷ್ಟ್ರಭಕ್ತ ಬಳಗದಿಂದ ಜೂ.25ರಂದು ಬೆಳಗ್ಗೆ 10ಕ್ಕೆ ರಾಮಣ್ಣಶ್ರೇಷ್ಠಿ ಪಾರ್ಕ್‌ನಿಂದ ಶಿವಪ್ಪ ನಾಯಕ ವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಳಗದ ಸಹ ಸಂಚಾಲಕ, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಹೇಳಿದರು.

ದೇಶದಲ್ಲಿ ಹಿಂದು ಯುವತಿಯರನ್ನು ಗುರಿಯಾಗಿಸಿಕೊಂಡು ಮುಸ್ಲಿಂ ಯುವಕರು ಲವ್ ಜಿಹಾದ್ ನಡೆಸುತ್ತಿದ್ದಾರೆ. ಈ ಮೂಲಕ ಹಿಂದುಗಳನ್ನು ನಾಶ ಮಾಡಿ ಇಸ್ಲಾಮಿಕರಣ ಮಾಡಲು ಹೊರಟಿದ್ದು, ಇದೀಗ ರಾಜ್ಯ ಸರ್ಕಾರ ಮುಸ್ಲಿಮರನ್ನು ಓಲೈಸಿಕೊಂಡು ತುಷ್ಟೀಕರಣದ ರಾಜಕೀಯ ಮಾಡಿ ಮತ ಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ ಮಾಡಲು ಹೊರಟಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಈ ಹಿಂದೆ ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಿ ಇನ್ನುಳಿದ ಧರ್ಮಿಯರಿಗೆ ಅನ್ಯಾಯ ಮಾಡಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದೀಗ ವಸತಿ ಯೋಜನೆಯಡಿ ಮುಸ್ಲಿಮರಿಗೆ ಶೇ.15ರಷ್ಟು ಮೀಸಲಾತಿ ನೀಡಲು ತೀರ್ಮಾನಿಸಿದೆ. ಬುದ್ಧ, ಬಸವ, ಅಂಬೇಡ್ಕರ್ ಎಂದು ಹೇಳುವ ಸಿಎಂ ಸಿದ್ದರಾಮಯ್ಯ ಧರ್ಮಾಧಾರಿತ ಮೀಸಲಾತಿ ಜಾರಿಗೆ ತರಲು ಮುಂದಾಗಿದ್ದಾರೆ. ಅಂಬೇಡ್ಕರ್ ಅವರ ತತ್ವಕ್ಕೆ ತಿಲಾಂಜಲಿ ಇಟ್ಟು ಅಲ್ಪಸಂಖ್ಯಾತರಿಗೆ ಮೀಸಲಾತಿ ಜಾರಿಗೆ ತರುವ ಮೂಲಕ ಅವರನ್ನು ಅವಮಾನಿಸಿದ್ದಾರೆ ಎಂದು ದೂರಿದರು.

ಸಾಮಾಜಿಕ ನ್ಯಾಯದ ಹರಿಕಾರ ಬಸವಣ್ಣ ಅವರನ್ನು ರಾಜ್ಯದ ಸಾಂಸ್ಕೃತಿಕ ರಾಯಭಾರಿಯನ್ನಾಗಿಸಿದ ಸರ್ಕಾರ ಈಗ ಅಣ್ಣನ ಆಶಯದಂತೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಮಾತನ್ನು ಮರೆತು ಸರ್ವವೂ ಮುಸ್ಲಿಮರ ಪಾಲು ಎಂದು ನಿರೂಪಿಸಲು ಹೊರಟಿದೆ. ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಒಂದು ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಆದರೂ ಮತ್ತೆ ಬಡವರಿಗೆ ಮೀಸಲಿರುವ ಮನೆಗಳನ್ನು ಕಿತ್ತು ಅಲ್ಪಸಂಖ್ಯಾತರಿಗೆ ನೀಡಲು ಹೊರಟಿರುವುದು ಖಂಡನೀಯ ಎಂದರು.

ಹಾಗಾಗಿ ಮಾಜಿ ಡಿಸಿಎಂ, ರಾಷ್ಟ್ರಭಕ್ತದ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಸರ್ಕಾರದ ನಿರ್ಧಾರ ಖಂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಪ್ರಮುಖರಾದ ಎಂ.ಶಂಕರ್, ಇ.ವಿಶ್ವಾಸ್, ಶಿವಾಜಿ, ಜಾದವ್, ಚನ್ನಬಸಪ್ಪ, ಕುಬೇರಪ್ಪ, ಗೋವಿಂದಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net