

ಮಡಿಕೇರಿ: ಸಂಸತ್‌ನಲ್ಲಿ ಗೃಹ ಸಚಿವ ಅಮಿತ್ ಷಾ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ವಿವಿಧ ಸಂಘಟನೆಗಳು ಡಿ.೨೪ರಂದು ಮಡಿಕೇರಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಹಿಂದ ಮುಖಂಡರಾದ ಮೋಹನ್ ಮೌರ್ಯ ತಿಳಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಲೋಕಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರು ಪ್ರಸ್ತಾಪಿಸುತ್ತಾ ಅಪಹಾಸ್ಯ ಮಾಡಿದ್ದು, ಇದು ದೇಶದ ಸಂವಿಧಾನಕ್ಕೆ ಮಾಡಿರುವ ಅವಮಾನ. ಅಮಿತ್ ಷಾ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಇದರ ಭಾಗವಾಗಿ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಡಿ.೨೪ರಂದು ಬೆಳಗ್ಗೆ ೧೧ ಗಂಟೆಗೆ ಕೊಡಗು ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ, ಅಹಿಂದ ಒಕ್ಕೂಟ, ಸಮಾನ ಮನಸ್ಕರ ಒಕ್ಕೂಟ ಮತ್ತು ಪ್ರಗತಿಪರ ಚಿಂತಕರ ಒಕ್ಕೂಟದ ಸಹಯೋಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಹಿಂದ ಮುಖಂಡರಾದ ಇಸಾಕ್ ಖಾನ್ ಮಾತನಾಡಿ, ಅಂಬೇಡ್ಕರ ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಅಮಿತ್ ಷಾ ಮರೆತಂತೆ ಕಾಣುತ್ತಿದೆ. ಅವರಿಗೆ ರಾಜಕೀಯವಾಗಿ ಸ್ಥಾನಮಾನ ಕೊಟ್ಟಿದ್ದು ಭಾರತದ ಸಂವಿಧಾನ ಎಂಬುದನ್ನು ನೆನಪಿಟ್ಟುಕೊಳ್ಳಲಿ ಎಂದ ಅವರು, ಕೇಂದ್ರ ಸರ್ಕಾರ ಕೂಡಲೇ ಅವರ ಮಂತ್ರಿ ಸ್ಥಾನವನ್ನು ರದ್ದುಗೊಳಿಸಿ ಪಕ್ಷದಿಂದ ಉಚ್ಛಾಟನೆ ಮಾಡಬೇಕು. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ದಸಂಸ ಜಿಲ್ಲಾ ಸಂಚಾಲಕ ದಿವಾಕರ ಮಾತನಾಡಿ, ದಲಿತರ ದೇವರೇ ಅಂಬೇಡ್ಕರ್. ಅಂತಹವರಿಗೆ ಅವಮಾನ ಮಾಡಿರುವ ಅಮಿತ್ ಷಾರನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಗಣೇಶ್, ಮುಸ್ತಫಾ ಹಾಜರಿದ್ದರು.