ದಲ್ಲಾಳಿಗಳ ಹಾವಳಿಗೆ ನಲುಗಿದ ಪುರಸಭೆ

dj hsd protest
Published on

ಹೊಸದುರ್ಗ: ದಲ್ಲಾಳಿಗಳ ಹಾವಳಿಯಿಂದಾಗಿ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಪ್ರತಿದಿನ ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿ ಬಿಜೆಪಿ ಪುರಸಭಾ ಸದಸ್ಯರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ವಿಶೇಷ ಅನುದಾನ ಹಾಗೂ ನಗರೋತ್ಥಾನ ಯೋಜನೆಯಡಿ ಸರ್ಕಾರ ಪುರಸಭೆಗೆ 2021ರಲ್ಲಿ 20 ಕೋಟಿ ಅನುದಾನ ಬಿಡುಗಡೆ ಮಾಡಿತ್ತು.

ಟೆಂಡರ್ ಪಡೆದ ಗುತ್ತಿಗೆದಾರರು 23 ವಾರ್ಡಗಳಲ್ಲೂ ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ಅಪೂರ್ಣಗೊಳಿಸಿದ್ದು ಸಾರ್ವಜನಿಕರಿಗೆ ತೊಂದರೆಯಾಗಿದೆ. ಕೆಲಸಕ್ಕೆ ಆದೇಶ ನೀಡಿ 8 ತಿಂಗಳಾದರೂ ಕಾಮಗಾರಿ ಅರಂಭವಾಗಿಲ್ಲ ಎಂದು ಆರೋಪಿಸಿದರು.

ಪುರಸಭಾ ಸದಸ್ಯರಿಗೆ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ. ಯಾವುದೇ ಕೆಲಸ ನಡೆಯುತ್ತಿಲ್ಲ. ಸಾರ್ವಜನಿಕರು ಕಚೇರಿಗೆ ಅಲೆದು, ಅಧಿಕಾರಿಗಳ ವರ್ತನೆಗೆ ಬೇಸತ್ತು ಹಿಡಿ ಶಾಪ ಹಾಕುತ್ತಿದ್ದಾರೆ.

ಆಡಳಿತ ಯಂತ್ರ ಸಂಪೂರ್ಣ ಕುಸಿದು ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಾರ್ವಜನಿಕರಿಗೆ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಪುರಸಭೆ ಸಂಪೂರ್ಣ ವಿಫಲವಾಗಿದೆ.

ಸಮಸ್ಯೆಗಳ ಕುರಿತು ಪುರಸಭಾ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ಪತ್ರ ಬರೆಯುವ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟವರು ಸಮಸ್ಯೆಗೆ ಪರಿಹಾರ ನೀಡದಿದ್ದರೆ, ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ಪುರಸಭಾ ಸದಸ್ಯರಾದ ಎಂ.ಶ್ರೀನಿವಾಸ್, ಮಂಜುನಾಥ್, ದೊಡ್ಡಯ್ಯ, ನಾಗರಾಜ, ಆರ್.ಎಸ್.ಪ್ರಶಾಂತ್ ಇತರರಿದ್ದರು.

ಪುರಸಭೆಯ ಆಡಳಿತ ಕುಸಿದಿದ್ದು, ಸಾರ್ವಜನಿಕರು ಸಮಸ್ಯೆ ಹೇಳಿಕೊಳ್ಳಲು ಸಾಧ್ಯವಾಗದಂತಾಗಿದೆ. ಮುಖ್ಯಾಧಿಕಾರಿ, ಕಂದಾಯಾಧಿಕಾರಿ, ವ್ಯವಸ್ಥಾಪಕ, ಇಂಜಿನಿಯರ್ ಹುದ್ದೆಗಳು ಖಾಲಿಯಿವೆ. ಅಧಿಕಾರಿಗಳಿಲ್ಲದೆ ಆಡಳಿತ ನಡೆಯುವುದು ಕಷ್ಟವಾಗಿದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಲಿ.ಎಂ.ಶ್ರೀನಿವಾಸ್, ಪುರಸಭಾ ಮಾಜಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net