

ಮಂಡ್ಯ: ನಗರದ ಕಾಳಿಕಾಂಭ ಶ್ರಮಿಕ ನಗರದ ವಿಚಾರವಾಗಿ ಕಳೆದ ಸೆ.19 ಉಚ್ಚ ನ್ಯಾಯಾಲಯ ನಿವಾಸಿಗಳ ಪರವಾಗಿ ತೀರ್ಪು ನೀಡಿದೆ. ಆದರೆ ಹಲವು ದಿನ ಕಳೆದರೂ 39 ಮನೆ ನಿರ್ಮಾಣ ಕಾಮಗಾರಿ ಪ್ರಾರಂಭಿಸದಿರುವುದನ್ನು ಖಂಡಿಸಿ ನಗರದಲ್ಲಿ ಶ್ರಮಿಕ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಕರ್ನಾಟಕ ಜನಶಕ್ತಿ, ಮಹಿಳಾ ಮುನ್ನಡೆ ಹಾಗೂ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟ ನೇತೃತ್ವದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ಎದುರು ಪ್ರತಿಭಟನೆ ನಡೆಸಿ, ಅಧಿಕಾರಿಗಳ ವಿರುದ್ದ ಆಕ್ರೋಶ ಹೊರ ಹಾಕಿದರು. 2018 ರಿಂದ 2025 ವರೆಗೆ ಸುದೀರ್ಘ ಸಮಯ ಹೈಕೋರ್ಟ್‌ನಲ್ಲಿ ನಡೆದ ಪ್ರಕರಣದಲ್ಲಿ ಕಾಳಿಕಾಂಭ ಸೇವಾ ಸಮಿತಿಯ ರಿಟ್ ಅರ್ಜಿಯನ್ನು ಉಚ್ಚ ನ್ಯಾಯಾಲಯ ವಜಾ ಮಾಡಿ, ಜನರ ಪರವಾಗಿ ತೀರ್ಪು ನೀಡಿದೆ. ಆದಾಗ್ಯೂ ಕೊಳಗೇರಿ ಅಭಿವೃದ್ಧಿ ಮಂಡಳಿಯವರು ಮನೆಗಳ ಕಾಮಗಾರಿಯನ್ನು ಪ್ರಾರಂಭಿಸದೆ ಮತ್ತೆ ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದರು.
2006ರಿಂದ ಕಾಳಿಕಾಂಭ ಶ್ರಮಿಕ ನಗರದ ಜನರು ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ನೇತೃತ್ವದಲ್ಲಿ 2025ರ ತನಕ 2 ದಶಕ ಜಾಗವನ್ನು ಉಳಿಸಿಕೊಳ್ಳಲು 39 ಕುಟುಂಬಗಳು 3 ತಲೆಮಾರು ಸುದೀರ್ಘ ಹೋರಾಟ ಮಾಡಿದೆ. ತಮ್ಮ ಹಕ್ಕಿನ ವಸತಿ ಹಾಗೂ ಮೂಲ ಸೌಲಭ್ಯಗಳನ್ನು ಪಡೆಯಲು 20 ವರ್ಷ ಉರುಳಿವೆ. ಮನೆಯ ಕನಸನ್ನು ಕಂಡ ಅದೆಷ್ಟೋ ಹಿರಿಯರು ಅಗಲಿದ್ದಾರೆ. ಆದರೂ ಇಂದಿಗೂ ಸಹ ಪಟ್ಟಭದ್ರ ಶಕ್ತಿಗಳ ವಿರುದ್ಧ ಹೋರಾಟ ತಪ್ಪಿಲ್ಲ ಎಂದು ಅಳಲು ತೋಡಿಕೊಂಡರು.
ಜಾಗಕ್ಕೆ ಸಂಬಂಧಿಸಿದಂತೆ ಕಾಳಿಕಾಂಭ ಸೇವಾ ಸಮಿತಿಯ ಆಕ್ಷೇಪದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ವಜಾಗೊಳಿಸಿ ಮತ್ತೆ ಬಡಜನರ ಪರವಾದ ನ್ಯಾಯವನ್ನು ಎತ್ತಿ ಹಿಡಿದಿದ್ದಾರೆ. ಇದರಿಂದ ಜನರ ನಂಬಿಕೆಗೆ ಮತ್ತಷ್ಟು ಬಲ ತುಂಬಿದ್ದಾರೆ. ಹೈಕೋರ್ಟ್ ತೀರ್ಪು ಬಂದ ತಕ್ಷಣ ತುರ್ತು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರೂ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಕಾಮಗಾರಿ ಆರಂಭಿಸಿಲ್ಲ ಎಂದು ದೂರಿದರು.
ಪ್ರತಿಭಟನೆಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸದಸ್ಯ ಕಾರ್ಯದರ್ಶಿ ಸಿದ್ದರಾಜು, ಶ್ರಮಿಕರಾದ ಗೀತಾ, ಮಹೇಶ್ವರಿ, ಶಶಿಕಲಾ, ಹರೀಶ, ನಿಂಗಮ್ಮ, ಲಕ್ಷ್ಮೀ, ಗಣೀಶ, ಗೋಪಾಲ್ ಇತರರಿದ್ದರು.