ರೈಲು ಕಂಬಿ ಅಳವಡಿಕೆ ಆಗ್ರಹಿಸಿ ಗಿರಿಜನರ ಪ್ರತಿಭಟನೆ

28 HANUR 2
ಅರಣ್ಯದಂಚಿನ ಜಮೀನನ ಸುತ್ತಲು ರೈಲ್ವೆ ಕಂಬಿ ಅಳವಡಿಸುವಂತೆ ಆಗ್ರಹಿಸಿ ಅರೆಕಡುವಿನ ದೊಡ್ಡಿಯಲ್ಲಿ ಗಿರಿಜನರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಡಿಸಿಎಫ್ ಡಾ.ಸಂತೋಷ್‌ಕುಮಾರ್ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಮಂಜುಳಾ, ನವೀನ್ ಮಠದ್ ಇದ್ದರು.
Published on

ಹನೂರು: ತಾಲೂಕಿನ ಅರೆಕಡುವಿನ ದೊಡ್ಡಿಯ ಜಮೀನಿನ ಅರಣ್ಯದಂಚಿನಲ್ಲಿ ರೈಲ್ವೆ ಕಂಬಿಯನ್ನು ಅಳವಡಿಸುವಂತೆ 10 ದಿನಗಳಿಂದಲೂ ಅರಣ್ಯ ಇಲಾಖೆಯ ವಿರುದ್ಧ ಗಿರಿಜನರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಗುರುವಾರ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಡಾ.ಸಂತೋಷ್‌ಕುಮಾರ್ ಭೇಟಿ ನೀಡಿ ಸಮಸ್ಯೆ ಆಲಿಸಿದರು.

ಈ ವೇಳೆ ವಿ.ಎಸ್ ದೊಡ್ಡಿ ಸೋಲಿಗ ಸರ್ಕಲ್ ಸಂಘದ ಅಧ್ಯಕ್ಷ ನಾಗಣ್ಣ ಮಾತನಾಡಿ, ಅಂಡೆಕುರುಬರ ದೊಡ್ಡಿ, ಅರೆಕಡುವಿನ ದೊಡ್ಡಿ, ವಿ.ಎಸ್. ದೊಡ್ಡಿ ಹಾಗೂ ಬಿ.ಜಿ. ದೊಡ್ಡಿಯಲ್ಲಿ ವಾಸಿಸುತ್ತಿರುವ ಗಿರಿಜನರಿಗೆ ಸರ್ಕಾರ ಅರಣ್ಯ ಹಕ್ಕು ಕಾಯ್ದೆಯಡಿ ಜಮೀನು ಹಕ್ಕು ಪತ್ರವನ್ನು ನೀಡಿದ್ದು, ಹಲವು ವರ್ಷಗಳಿಂದಲೂ ಸಾಗುವಳಿ ಭೂಮಿಯಲ್ಲಿ ಕೃಷಿ ಮಾಡಲಾಗುತ್ತಿದೆ. ಆದರೆ ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಜಮೀನಿಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಿವೆ. ಇದರಿಂದ ನಷ್ಟವನ್ನು ಅನುಭವಿಸುತ್ತಿದ್ದೇವೆ. ಆದರೆ ಅರಣ್ಯ ಇಲಾಖೆ ಈ ಭಾಗದಲ್ಲಿ ಕಂದಾಯ ಇಲಾಖೆಗೆ ಸೇರಿದ ಆರ್‌ಟಿಸಿ ಹೊಂದಿರುವ ಅರಣ್ಯ ಅಂಚಿನಲ್ಲಿರುವ ಜಮೀನುಗಳಿಗೆ ಮಾತ್ರ ಸುತ್ತಲು ರೈಲ್ವೆ ಕಂಬಿಗಳನ್ನು ಅಳವಡಿಸುತ್ತಿದೆ. ಇದರಿಂದ ಅರಣ್ಯ ಹಕ್ಕು ಕಾಯ್ದೆಯಡಿ ನೀಡಿರುವ ಜಮೀನನ್ನು ಕಸಿದು ಕೊಳ್ಳುವ ಹುನ್ನಾರ ನಡೆಸುತ್ತಿದೆ. ಜತೆಗೆ ಕಾಡು ಪ್ರಾಣಿಗಳ ಹಾವಳಿ ಇನ್ನಷ್ಟು ಹೆಚ್ಚಾಗಲಿದೆ. ಇದರಿಂದ ಮುಖ್ಯವಾಗಿ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಗಿರಿಜನ ರೈತರಿಗೆ ತುಂಬ ತೊಂದರೆಯಾಗಲಿದೆ. ರೈಲ್ವೆ ಕಂಬಿಯನ್ನು ಅಳವಡಿಸುವಂತೆ 10 ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದರೂ ಈ ಬಗ್ಗೆ ಕ್ರಮವಹಿಸಿಲ್ಲ. ಇತ್ತ ಸ್ಥಳೀಯ ಶಾಸಕರು ಇತ್ತ ಗಮನಹರಿಸಿಲ್ಲ. ಆದ್ದರಿಂದ ಈ ಬಗ್ಗೆ ಕೂಡಲೇ ಅಗತ್ಯ ಕ್ರಮಕೈಗೊಂಡು ರೈಲ್ವೆ ಕಂಬಿ ಅಳವಡಿಸುವಂತೆ ಒತ್ತಾಯಿಸಿದರು.

ಈ ವೇಳೆ ಡಾ.ಸಂತೋಷ್‌ಕುಮಾರ್ ಮಾತನಾಡಿ, ರೈಲ್ವೆ ಕಂಬಿ ಅಳವಡಿಸುವ ಕಾಮಗಾರಿಗೆ 1.50 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಹಾಗಾಗಿ ಟೆಂಡರ್ ಮೂಲಕ ಕಾಮಗಾರಿಯನ್ನು ಕೈಗೊಳ್ಳಬೇಕಿದೆ. ಆದ್ದರಿಂದ ನಮ್ಮ ಹಂತದಲ್ಲಿ ಈ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಈ ಸಂಬಂಧ ಮನವಿ ಪತ್ರ ಸಲ್ಲಿಸಿದರೆ ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅಗತ್ಯ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೆ ಒಪ್ಪದ ಗಿರಿಜನರು ಪ್ರತಿಭಟನೆಯನ್ನು ಮುಂದುವರಿಸಿದ್ದು, ರೈಲ್ವೆ ಕಂಬಿ ಅಳವಡಿಸುವೆರಗೂ ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಈ ವೇಳೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ತಾಲೂಕು ಸಹಾಯಕ ನಿರ್ದೇಶಕ ನವೀನ್ ಮಠದ್ ಇದ್ದರು.
ಪ್ರತಿಭಟನೆಯಲ್ಲಿ ಗಿರಿಜನ ಮುಖಂಡರಾದ ಪೆದ್ದೇಗೌಡ, ಬಸವರಾಜು, ಜಡೇಯಪ್ಪ, ಮಾದಪ್ಪ, ಮಾದೇಶ್, ಜಡೇಸ್ವಾಮಿ, ಬೊಮ್ಮಮ್ಮ, ಮಾದೇವ, ಮೀನಾ, ಶಿವಮ್ಮ, ಬಸಮ್ಮ, ರಾಮಮ್ಮ ಹಾಗೂ ಇನ್ನಿತರರು ಭಾಗವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net