

ಮೈಸೂರು: ಕಬ್ಬಿನ ಬೆಳೆಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರು ಸಂಘದ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಬಣ್ಣಾರಿ ಸಕ್ಕರೆ ಕಾರ್ಖಾನೆ ಈ ವ್ಯಾಪ್ತಿಯ ಕಬ್ಬನ್ನು ಬೇರೆ ಜಿಲ್ಲೆಗಳ ಕಾರ್ಖಾನೆಗಳಿಗೆ ಸಾಗಾಟಕ್ಕೆ ನಿರ್ಬಂಧ ಹೇರಬಾರದು ಎಂದು ರೈತರು ಆಗ್ರಹಿಸಿದರು.
ರಾಜ್ಯ ಸರ್ಕಾರ ಹಿಂದಿನ ವರ್ಷ ಘೋಷಣೆ ಮಾಡಿದ ಕಬ್ಬಿನ ಹೆಚ್ಚುವರಿ ದರ ಪ್ರತಿ ಟನ್ ಕಬ್ಬಿಗೆ 150 ರೂ. ನಿಗದಿ ಮಾಡಿರುವುದನ್ನು ಬಣ್ಣಾರಿ ಸಕ್ಕರೆ ಕಾರ್ಖಾನೆ ರೈತರಿಗೆ ಪಾವತಿ ಮಾಡಿಲ್ಲ. ಕಾರ್ಖಾನೆ ಆರಂಭಕ್ಕೆ ಮೊದಲು ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಬರಗಾಲದ ಹಿನ್ನೆಲೆಯಲ್ಲಿ ಕಬ್ಬು ಬೆಳೆ ಇಳುವರಿ ಕಡಿಮೆ ಇದ್ದು, ಕಬ್ಬು ಉತ್ಪಾದನೆ ವೆಚ್ಚ ಅಧಿಕವಾಗಿರುವ ಕಾರಣ ಟನ್ ಕಬ್ಬಿಗೆ 4 ಸಾವಿರ ರೂ. ನಿಗದಿಪಡಿಸಬೇಕು. ಎಲ್ಲ ಬ್ಯಾಂಕ್‌ಗಳಲ್ಲಿ ಸಹಕಾರ ಸಂಘಗಳ ಬ್ಯಾಂಕ್‌ನಂತೆ ಬಡ್ಡಿ ರಹಿತ ಸಾಲ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತರು ಬರಗಾಲ ಸಂಕಷ್ಟದಲ್ಲಿದ್ದು, ಕೃಷಿ ಚಟುವಟಿಕೆ ನಡೆಸಲು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದಾರೆ. ಎಲ್ಲ ರೈತರಿಗೂ ಬರ ಪರಿಹಾರ ದೊರಕಿದರೆ ಕೃಷಿ ಚಟುವಟಿಕೆ ನಡೆಸಲು ಹೆಚ್ಚಿನ ಅನುಕೂಲವಾಗುತ್ತದೆ. ಈ ಬಗ್ಗೆ ತುರ್ತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರೈತರು ಮನವಿ ಮಾಡಿದರು.
ಮಳೆಗಾಲ ಆರಂಭವಾಗಿರುವ ಕಾರಣ ಕೃಷಿ ಚಟುವಟಿಕೆ ಮಾಡಲು ಹಾಗೂ ಅಂತರ್ಜಲ ವೃದ್ಧಿಗೆ ಜಿಲ್ಲೆಯ ಎಲ್ಲ ಕೆರೆಕಟ್ಟೆಗಳ ಹಾಗೂ ಕಾಲುವೆಗಳ ಹೂಳೆತ್ತಬೇಕು. ಬ್ಯಾಂಕ್‌ಗಳಲ್ಲಿ ರೈತರಿಗೆ ದೊರಕುವ ಸಾಲ ಮತ್ತು ಸೌಲಭ್ಯಗಳ ನಾಮಫಲಕ ಹಾಕುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು
ಮಳೆ, ಗಾಳಿಗೆ ಜಿಲ್ಲಾದ್ಯಂತ ಸಾವಿರಾರು ಎಕರೆ ಬಾಳೆ ಬೆಳೆ ನಷ್ಟವಾಗಿದೆ. ಇದಕ್ಕೆ ಪರಿಹಾರ ತಕ್ಷಣವೇ ನೀಡಬೇಕು. ಎಂ-ನರೇಗಾದಲ್ಲಿ ಕೆಲಸ ಮಾಡಿರುವ ಹಣವನ್ನು ನೀಡದೆ ಬಾಕಿ ಉಳಿಸಿಕೊಂಡಿದೆ. ಕಳೆದ ವರ್ಷದ ಸಾಮಗ್ರಿ ಮೊತ್ತವನ್ನು ನೀಡಿರುವುದಿಲ್ಲ. ಕೂಡಲೇ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಖಾಸಗಿ ಶಾಲಾ, ಕಾಲೇಜುಗಳಲ್ಲಿ ಗ್ರಾಮೀಣ ಭಾಗದ ರೈತರ ಮಕ್ಕಳು, ಕೂಲಿ ಕಾರ್ಮಿಕರ ಮಕ್ಕಳು, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪಡೆದುಕೊಳ್ಳಲು ದೇಣಿಗೆ ಮತ್ತು ಶುಲ್ಕ ಸುಲಿಗೆ ಮಾಡಲಾಗುತ್ತಿದೆ. ಪಾವತಿಸಲು ಕಷ್ಟಕರವಾದ ಕಾರಣ ಶಿಕ್ಷಣದಿಂದ ವಂಚಿತರಾಗುತ್ತಾರೆ. ಆದ್ದರಿಂದ ಇದಕ್ಕೆ ಕಡಿವಾಣ ಹಾಕಲು ಹಾಕಲು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದರು.
ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್, ಜಿಲ್ಲಾ ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ, ತಿ.ನರಸೀಪುರ ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ನಂಜನಗೂಡು ತಾಲೂಕು ಅಧ್ಯಕ್ಷ ದೇವನೂರು ವಿಜೇಂದ್ರ, ಮುಖಂಡರಾದ ಪ್ರದೀಪ್ ಕುರುಬೂರು, ಅಂಬಳೆ ಮಂಜುನಾಥ್, ಸಾತಗಳ್ಳಿ ಬಸವರಾಜು, ವರಕೋಡು ನಾಗೇಶ್, ರಾಜೇಶ್, ಕೂಡನಹಳ್ಳಿ ಸೋಮಣ್ಣ, ವಿಜಯೇಂದ್ರ, ಷಡಕ್ಷರಿಸ್ವಾಮಿ, ಕಿರಣ್ ನಂಜುಂಡಸ್ವಾಮಿ, ನಾಗೇಶ್ ದೊಡ್ಡ ಕಾಟೂರು, ಮಲ್ಲ ಶೆಟ್ಟಿ, ಪ್ರಕಾಶ್, ವಾಜಮಂಗಲ ಮಹದೇವು, ಮಾಲಿಂಗನಾಯಕ, ಸಿದ್ದರಾಮ, ಗಿರೀಶ್, ಚಂದ್ರು, ಪ್ರಕಾಶ್, ಸೋಮಶೇಖರ್ ಈ ಸಂದರ್ಭದಲ್ಲಿದ್ದರು.