ಹಿರಿಯ ನಾಗರಿಕರ ಬೃಹತ್ ಪ್ರತಿಭಟನೆ

IMG_20250116_211147_955.jpg
Published on

ಹುಬ್ಬಳ್ಳಿ: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ನಗರದಲ್ಲಿ ಹಿರಿಯ ನಾಗರಿಕರು ಬೃಹತ್ ಪ್ರತಿಭಟನೆ ನಡೆಸಿದರು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಹಿರಿಯರು ರ್ಯಾಲಿ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆದರು.

ಕರ್ನಾಟಕ ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬಜೆಟ್ ಬೇಡಿಕೆ ನಿವೇದನೆ ರ್ಯಾಲಿ ನಡೆಸಲಾಯಿತು.

ಅಖಿಲ ಭಾರತ ಹಿರಿಯ ನಾಗರಿಕರ ಜೀವನ ಗೌರವ ಅಭಿಯಾನ ಅಧ್ಯಕ್ಷ ವಿಜಯ ದೇಶಮುಖ ಅವರು ರ್ಯಾಲಿಗೆ ಚಾಲನೆ ನೀಡಿದರು.

ಪುಣೆಯ ಅರ್ಥಕ್ರಾಂತಿ ರಾಷ್ಟ್ರೀಯ ಸಾಕ್ಷರತಾ ಮಂಚ, ರಾಷ್ಟ್ರೀಯ ಹಿರಿಯ ನಾಗರಿಕರ ಜೀವನ ಗೌರವ ಅಭಿಯಾನ ಆಶ್ರಯದಲ್ಲಿ ನಡೆದ ಮೆರವಣಿಗೆಯು ನೆಹರು ಮೈದಾನದಿಂದ ಹೊರಟು ಲ್ಯಾಮಿಂಗ್ಟನ್ ರಸ್ತೆ ಮೂಲಕ ಚನ್ನಮ್ಮ ವೃತ್ತ ತಲುಪಿತು.

ವೃತ್ತದಲ್ಲಿನ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ ಬಹಿರಂಗ ಸಭೆ ನಡೆಸಲಾಯಿತು.
ಕೇಂದ್ರ ಸರ್ಕಾರವು ಹಿರಿಯ ನಾಗರಿಕರನ್ನು ರಾಷ್ಟ್ರದ ಸಂಪತ್ತು ಎಂದು ಘೋಷಿಸಬೇಕು.

ಹಿರಿಯ ನಾಗರಿಕರಿಗೆ ಮಾಸಿಕ 10 ಸಾವಿರ ರೂ. ಗೌರವ ಧನ ನೀಡಬೇಕು. ರಾಷ್ಟ್ರದ ಜನಸಂಖ್ಯೆಯ ಶೇ. 15ರಷ್ಟು ಇರುವ ಹಿರಿಯ ನಾಗರಿಕ ಸೌಲಭ್ಯ, ರಕ್ಷಣೆಗಾಗಿ ಪ್ರತ್ಯೇಕ ಸಚಿವಾಲಯ ಹಾಗೂ ಬಜೆಟ್ ಮಂಡಿಸಬೇಕು. ತಡೆ ಹಿಡಿದ ಹಿರಿಯ ನಾಗರಿಕರ ರೈಲ್ವೆ ರಿಯಾಯತಿ ಪಾಸ್ ತಕ್ಷಣ ಪ್ರಾರಂಭಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರಾಜ್ಯ ಸರ್ಕಾರ ಕೂಡ ಹಿರಿಯ ನಾಗರಿಕರ ವೃದ್ಧಾಪ್ಯ ವೇತನವನ್ನು 5 ಸಾವಿರಕ್ಕೆ ಹೆಚ್ಚಿಸುವುದು, ಉಚಿತ ಬಸ್ ಪ್ರಯಾಣ ಸೌಲಭ್ಯ, ನಿವೃತ್ತ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ 2ನೇ ಹಂತವನ್ನು ಸಂಪೂರ್ಣ ಅನುಷ್ಠಾನಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎ. ಪಾಟೀಲ ಮಾತನಾಡಿದರು. ಉಪಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಎಂ.ಡಿ. ಪಾಟೀಲ, ಆರ್.ಕೆ. ಮಠದ, ಸುನಂದಾ ಬೆನ್ನೂರ, ಡಿ.ಟಿ. ಪಾಟೀಲ ಹಾಗೂ ಇತರರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net