

ಬಳ್ಳಾರಿ : ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರು ಮಂಗಳವಾರ ಬಳ್ಳಾರಿ ಅಂಚೆ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಎಂಟು ಗಂಟೆಗಳ ಕೆಲಸ ನೀಡಿರುವುದು ಮತ್ತು ಪಿಂಚಣಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ಸೇವಾ ಹಿರಿತನದ ಆಧಾರದ ಮೇಲೆ ಸೇವೆ ಸಲ್ಲಿಸಿದ ನೌಕರರಿಗೆ ವಿಶೇಷ ಇಂಕ್ರಿಮೆಂಟ್ ನೀಡಬೇಕು ಎಂದು ಒತ್ತಾಯಿಸಿದರು.
ಅಲ್ಲದೆ ಗ್ರಾಚ್ಯುಟಿ ಮೇಲಿನ ಗರಿಷ್ಟ ಮೊತ್ತ 1.5 ಲಕ್ಷ ರೂ. ಮಿತಿಯನ್ನು ತೆಗೆದು ಹಾಕಿ ಕಮಲೇಶಚಂದ್ರ ಸಮಿತಿ ಶಿಫಾರಸು ಮಾಡಿದಂತೆ ಗರಿಷ್ಟ 5 ಲಕ್ಷ ರೂ.ಗಳ ವರೆಗೆ ಮೊತ್ತವನ್ನು ನೀಡಬೇಕು. ನೌಕರರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯಗಳು ಒದಗಿಸಬೇಕು. 30 ದಿನಗಳ ವೇತನ ಸಹಿತ ರಜೆ ನೀಡಬೇಕು ಮತ್ತು 7ನೇ ವೇತನದ ಶಿಫಾರಸಿನಂತೆ 180 ದಿನಗಳವರೆಗೆ ರಜೆ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ನೌಕರರು ಆಗ್ರಹಿಸಿದರು.
ಗ್ರೂಪ್ ಇನ್ಸೂೃರೆನ್ಸ್ ಕವರೇಜ್ 5 ಲಕ್ಷ ರೂ. ವರೆಗೆ ಹೆಚ್ಚಿಸಬೇಕು. ಅವೈಜ್ಞಾನಿಕ ಗುರಿ ಸಾಧಿಸದಿರುವ ನಿಟ್ಟಿನಲ್ಲಿ ನೌಕರರಿಗೆ ನೀಡುತ್ತಿರುವ ಕಿರುಕುಳ ನಿಲ್ಲಿಸಬೇಕು ಎಂದು ತಿಳಿಸಿದರು.
ಈ ಹಿಂದೆ ಹೋರಾಟ ಮಾಡಿದ ಫಲವಾಗಿ ಗ್ರಾಮೀಣ ಅಂಚೆ ನೌಕರರಿಗೆ ಕಳೆದ 2018ರಲ್ಲಿ 7ನೇ ವೇತನ ಆಯೋಗದಲ್ಲಿನ ಕೆಲ ಬೇಡಿಕೆಗಳನ್ನು ಈಡೇರಿಸಲಾಗಿದೆ. ಅಲ್ಲದೆ ತುರ್ತು ರಜೆ, ಹೆಣ್ಣು ಮಕ್ಕಳಿಗೆ ಹೆರಿಗೆ ಭತ್ಯೆ, ಮಕ್ಕಳ ಶಿಕ್ಷಣ ಭತ್ಯೆ, ಬೋನಸ್ ಇನ್ನು ಹಲವು ಸವಲತ್ತುಗಳನ್ನು ಹೋರಾಟದಿಂದ ಪಡೆದುಕೊಂಡಿದ್ದೇವೆ. ಇನ್ನು ಕೆಲವು ಬೇಡಿಕೆಗಳು ಈಡೇರಿಸಬೇಕಿದೆ. ಅವುಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ನೌಕರರು ಎಚ್ಚರಿಸಿದರು.
ಗ್ರಾಮೀಣ ಅಂಚೆ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಮಮೂರ್ತಿ, ಖಜಾಂಚಿ ಮಲ್ಲಿಕಾರ್ಜುನ, ವಲಯ ಉಪಾಧ್ಯಕ್ಷ ಎಚ್.ಎಂ.ವೀರಭದ್ರಯ್ಯ, ಮತ್ತಿತರರಿದ್ದರು.