

ಬಂಟ್ವಾಳ: ಪೊಳಲಿಯಲ್ಲಿ ಫಲ್ಗುಣಿ ನದಿಗೆ ನಿರ್ಮಾಣ ಮಾಡಲಾಗಿರುವ ಸೇತುವೆಯಲ್ಲಿ ದೊಡ್ಡ ವಾಹನ ಸಂಚಾರಕ್ಕೆ ಎರಡು ದುದರ ವಿರುದ್ಧ ಜನಾಕ್ರೋಶ ವ್ಯಕ್ತವಾದ ಬೆನ್ನಲೇ ಎಚ್ಚೆತ್ತ ಬಂಟ್ವಾಳ ತಹಸೀಲ್ದಾರರ ನೇತೃತ್ವದ ಅಧಿಕಾರಿಗಳ ದಂಡು ಸೋಮವಾರ ಪೊಳಲಿಗೆ ಆಗಮಿಸಿ ಗ್ರಾಮಸ್ಥರ ಮನವೊಲಿಸಿ ಮಂಗಳವಾರ ನಡೆಯಬೇಕಾಗಿದ್ದ ಪ್ರತಿಭಟನೆಯನ್ನು ಹಿಂತೆಗೆಸುವಲ್ಲಿ ಯಶಸ್ವಿಯಾಗಿದೆ.
ಬಂಟ್ವಾಳ ತಹಶೀಲ್ದಾರ್ ಡಿ. ಅರ್ಚನಾ ಭಟ್, ಲೋಕೋಪಯೋಗಿ ಇಲಾಖಾಧಿಕಾರಿಗಳು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಗಳು ಸ್ಥಳಕ್ಕಾಗಮಿಸಿ ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಸಂಧಾನ ಮಾತುಕತೆ ನಡೆಸಿದರು.
ಪರ್ಯಾಯ ರಸ್ತೆ ವ್ಯವಸ್ಥೆಯ ಬಗ್ಗೆ ಲೋಕೋಪಯೋಗಿ ಇಲಾಖಾಧಿಕಾರಿಗಳು ಹಾಗೂ ತಾಲೂಕಿನ ಅಧಿಕಾರಿಗಳ ಜತೆಗೆ ಚರ್ಚಿಸಲಾಗಿದೆ. ಹಾಗೆಯೇ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಮಾತುಕತೆಗೆ ಅವಕಾಶ ಕಲ್ಪಿಸಲಾಗುವುದು. ಒಂದು ವಾರದೊಳಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಅರ್ಚನಾ ಭಟ್ ಹೋರಾಟ ಸಮಿತಿಗೆ ಮನವರಿಕೆ ಮಾಡಿ ಮನವೊಲಿಸಿದರು.
ಶಾಸಕರ ಭರವಸೆ: ಶಾಸಕರು ಭರವಸೆಯಿತ್ತರೆ ಮಾತ್ರ ಪ್ರತಿಭಟನೆ ಹಿಂದೆೆಗೆದುಕೊಳ್ಳುವುದಾಗಿ ಸಮಿತಿ ಮುಖಂಡರು ಪಟ್ಟುಹಿಡಿದಾಗ ಶಾಸಕ ರಾಜೇಶ್ ನಾಕ್ ಉಳಿಪಾಡಿ ಅಗಮಿಸಿ ಪರ್ಯಾಯ ರಸ್ತೆ ಮಾಡಿಕೊಡುವ ಭರವಸೆ ನೀಡಿದರು. ತಾತ್ಕಾಲಿಕ ರಸ್ತೆಯ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ ಎಂದು ಹೋರಾಟ ಸಮಿತಿ ಮುಖಂಡರು ಹಾಗೂ ಗ್ರಾಮಸ್ಥರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಪೊಳಲಿ ಸ್ವಯಂಪ್ರೇರಿತ ಬಂದ್ ಹಾಗೂ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಹೋರಾಟ ಸಮಿತಿ ಪ್ರಮುಖರು ಘೋಷಿಸಿದರು.
ಬಂಟ್ವಾಳ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಚಿನ್, ಹೋರಾಟ ಸಮಿತಿ ಪದಾಧಿಕಾರಿಗಳಾದ ವೆಂಕಟೇಶ್ ನಾವುಡ ಪೊಳಲಿ, ಜಯರಾಮ್ ಕೃಷ್ಣ ಪೊಳಲಿ, ಅಬೂಬಕ್ಕರ್ ಅಮ್ಮುಂಜೆ , ಕಿಶೋರ್ ಪಲ್ಲಿಪಾಡಿ, ಲೋಕೇಶ್ ಪೊಳಲಿ, ಯು.ಪಿ.ಇಬ್ರಾಹಿಂ, ಚಂದ್ರಹಾಸ್ ಪಲ್ಲಿಪಾಡಿ, ಪೊಳಲಿ ಅಡ್ಡೂರು ಫಲ್ಗುಣಿ ಹೋರಾಟ ಸಮಿತಿಯ ಸದಸ್ಯರು ಉಪಸ್ಥಿತರಿದರು.