ವಸತಿ ನಿಲಯದ ಎದುರು ವಿದ್ಯಾರ್ಥಿನಿಯರ ಪ್ರತಿಭಟನೆ

Hostel protest
Published on

ಯಲ್ಲಾಪುರ: ಪಟ್ಟಣದ ಕಾಳಮ್ಮನಗರದ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ಮೇಲ್ವಿಚಾರಕಿ ವಿರುದ್ಧ ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಹಾಸ್ಟೆಲ್ ಮೇಲ್ವಿಚಾರಕಿ ಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಾರೆ. ಸಮಯಕ್ಕೆ ಸರಿಯಾಗಿ ಆಹಾರ ನೀಡದೇ ತೊಂದರೆ ನೀಡುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿನಿಯರು, ಅನ್ನ, ಆಹಾರ ಬಿಟ್ಟು ಹಾಸ್ಟೆಲ್ ಎದುರು ಪ್ರತಿಭಟನೆ ನಡೆಸಿದರು. ಮೇಲ್ವಿಚಾರಕಿಯನ್ನು ಬೇರೆಡೆ ವರ್ಗಾಯಿಸಿ, ಬೇರೆಯವರನ್ನು ನೇಮಕ ಮಾಡುವಂತೆ ಆಗ್ರಹಿಸಿದರು. ಅಲ್ಲದೆ, ಮೇಲಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು.

ಶಾಸಕ ಹೆಬ್ಬಾರ್ ನಿರ್ದೇಶನದಂತೆ ಸ್ಥಳಕ್ಕೆ ಭೇಟಿ ನೀಡಿದ ತಾಪಂ ಇಒ ಜಗದೀಶ ಕಮ್ಮಾರ, ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಿದರು. ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸುವ ಯತ್ನ ನಡೆಸಿದರು. ಮೇಲ್ವಿಚಾರಕಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹಾಗೂ ಬೇರೆಯವರನ್ನು ನೇಮಿಸುವ ಕುರಿತು ಕಮ್ಮಾರ ಅವರು ಭರವಸೆ ನೀಡಿದ ನಂತರ ವಿದ್ಯಾರ್ಥಿನಿಯರು ಪ್ರತಿಭಟನೆ ಹಿಂಪಡೆದರು. ಇದೇ ವೇಳೆ ಪಪಂ ಸದಸ್ಯೆ ನರ್ಮದಾ ನಾಯ್ಕ ಹಾಸ್ಟೆಲ್‌ಗೆ ಭೇಟಿ ನೀಡಿ, ವಿದ್ಯಾರ್ಥಿನಿಯರೊಂದಿಗೆ ಚರ್ಚಿಸಿದರು.

ಪಾಲಕರ ದೂರಿನಂತೆ ಸೋಮವಾರವಷ್ಟೇ ಶಾಸಕ ಶಿವರಾಮ ಹೆಬ್ಬಾರ್ ಹಾಸ್ಟೆಲ್‌ಗೆ ದಿಢೀರ್ ಭೇಟಿ ನೀಡಿ, ಮೇಲ್ವಿಚಾರಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಮಾರನೇ ದಿನವೇ ವಿದ್ಯಾರ್ಥಿನಿಯರು ಮೇಲ್ವಿಚಾರಕಿ ವಿರುದ್ಧ ಪ್ರತಿಭಟನೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net