ಜಮೀನಿಗೆ ನೀರು ನುಗ್ಗಿ ಬೆಳೆ ನಷ್ಟ: ದೊಡ್ಡಗರುಡನಹಳ್ಳಿ ಗ್ರಾಮದಲ್ಲಿ ರೈತರ ಪ್ರತಿಭಟನೆ

Protest of farmers of Doddagarudanahalli village Mandya
Published on

ಮಂಡ್ಯ: ವಿಶ್ವೇಶ್ವರಯ್ಯ ನಾಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಏರಿ ಮೇಲಿನಿಂದ ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟಕ್ಕೆ ಕಾರಣವಾಗುತ್ತಿದೆ ಎಂದು ಆರೋಪಿಸಿ ತಾಲೂಕಿನ ದೊಡ್ಡಗರುಡನಹಳ್ಳಿ ಗ್ರಾಮದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ವಿಶ್ವೇಶ್ವರಯ್ಯ ನಾಲೆಯ ಕೊಪ್ಪ ವಿಭಾಗಕ್ಕೆ ಹರಿಯುವ ನಾಲೆ ಬಳಿ ಜಮಾಯಿಸಿದ ರೈತರು, ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಹೂಳು ತುಂಬಿರುವುದರಿಂದ ನಾಲೆಯಲ್ಲಿ ಹರಿಯುತ್ತಿರುವ ನೀರು ಏರಿ ಮೇಲಿಂದ ಜಮೀನಿಗೆ ನುಗ್ಗುತ್ತಿದೆ. ಇದರಿಂದಾಗಿ ರೈತರ ಬೆಳೆ ನಾಶವಾಗುವುದರ ಜತೆಗೆ ಜಮೀನಿಗೆ ತೆರಳಲು ಕಷ್ಟಸಾಧ್ಯವಾಗುತ್ತಿದೆ ಎಂದು ಆರೋಪಿಸಿದರು. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಾಲಾ ಏರಿಮೇಲೆ ಹೆಚ್ಚುವರಿ ನೀರು ಹರಿಯುತ್ತಿರುವುದರಿಂದಾಗಿ ಕಾಲುವೆ ಕೋಡಿ ರಸ್ತೆ ಹಾಳಾಗುತ್ತಿದೆ. ದೊಡ್ಡಗರುಡನಹಳ್ಳಿ ಬಳಿ ಮಂಡ್ಯ-ನಾಗಮಂಗಲ ರಸ್ತೆಯ ಮೇಲೂ ನೀರು ಹರಿಯುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾರೂ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇದನ್ನು ತಡೆಗಟ್ಟಲು ಮುಂದಾಗಲಿಲ್ಲ ಎಂದು ಕಿಡಿಕಾರಿದರು.

ಹಲವಾರು ವರ್ಷಗಳಿಂದ ನಾಲೆಯಲ್ಲಿ ಹೂಳು ತೆಗೆಯದ ಕಾರಣ ನೀರು ಸರಾಗವಾಗಿ ಕೊನೆ ಭಾಗಕ್ಕೆ ತಲುಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ತಕ್ಷಣ ಇದನ್ನು ಸರಿಪಡಿಸಿ ನಾಲೆಯಲ್ಲಿರುವ ಹೂಳು ತೆಗೆಸಬೇಕು. ಕೊನೇ ಭಾಗದ ರೈತರಿಗೆ ನೀರನ್ನೂ ಕೊಡುವುದರ ಜತೆಗೆ ನಾಲಾ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗದಂತೆ ಎಚ್ಚರ ವಹಿಸಬೇಕು. ಇಲ್ಲದ್ದಿದಲ್ಲಿ ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಪಟೇಲ್ ಆನಂದ್, ಚನ್ನಕೇಶವ, ಮರೀಗೌಡ, ಶಾಮಿಯಾನ ಆನಂದ್, ಗ್ರಾ.ಪಂ. ಸದಸ್ಯ ಕುಮಾರ್, ಕೆಂಪೇಗೌಡ, ರುದ್ರೇಶ, ಪುಟ್ಟಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net