ಇಂಗಳೇಶ್ವರ ಗ್ರಾಮದ ರೈತರ ಪ್ರತಿಭಟನೆ

Protest of farmers in Ingaleshwar village
ಇಂಗಳೇಶ್ವರ ಗ್ರಾಮದ ರೈತರು ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ್​ ಅವರಿಗೆ ಮನವಿ ಸಲ್ಲಿಸಿದರು. ಅರವಿಂದ ಕುಲಕರ್ಣಿ, ರುದ್ರಯ್ಯ ಹಿರೇಮಠ, ನಿಂಗಯ್ಯ ಅಚನೂರ ಮತ್ತಿತರರಿದ್ದಾರೆ.
Published on

ವಿಜಯಪುರ: ಹಾನಿಗೊಳಗಾದ ತೊಗರಿ ಬೆಳೆಗೆ ಪರಿಹಾರ ಬಿಡುಗಡೆ ಮಾಡದ ವಿಮಾ ಕಂಪನಿ ವಿರುದ್ಧ ಇಂಗಳೇಶ್ವರ ಗ್ರಾಮದ ರೈತರು ಅಖಂಡ ಕರ್ನಾಟಕ ರೈತ ಸಂದ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಟಿ. ಭೂಬಾಲನ್​ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ರೈತರು, ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ ಬೆಳೆ ಸಂಪೂರ್ಣ ಹಾನಿಯಾಗಿದೆ. ಫಸಲ್​ ಬಿಮಾ ಯೋಜನೆಯಡಿ ವಿಮಾ ಕಂತು ತುಂಬಿದರೂ ಪರಿಹಾರ ಹಣ ಬಿಡುಗಡೆ ಮಾಡಿಲ್ಲ ಎಂದು ಸರ್ಕಾರ ಮತ್ತು ವಿಮಾ ಕಂಪನಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಂದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಇಂಗಳೇಶ್ವರ ಗ್ರಾಮದ ರೈತರು ಫಸಲ್​ ಬಿಮಾ ಯೋಜನೆಯಡಿ ಪ್ರತಿ ಎಕರೆಗೆ ಹಣ ಪಾವತಿಸಿದರೂ ಕಳೆದ 5 ವರ್ಷಗಳಿಂದ ಒಂದು ಪೈಸೆ ಕೂಡ ಪರಿಹಾರ ಬಂದಿಲ್ಲ. ಅಲ್ಲಿನ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಇಂಗಳೇಶ್ವರ ಗ್ರಾ.ಪಂ. ವ್ಯಾಪ್ತಿಗೆ ಬರುವ ರೆಬಿನಾಳ ಗ್ರಾಮದ ರೈತರಿಗೆ ತೊಗರಿ ಪರಿಹಾರ ಬಂದಿದೆ. ಆದರೆ, ಇಂಗಳೇಶ್ವರಕ್ಕೆ ಮಾತ್ರ ಪರಿಹಾರ ಹಣ ಬಿಡುಗಡೆಗೊಳಿಸದೆ ಇರುವುದು ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಸವರುವ ಕೆಲಸವನ್ನು ವಿಮಾ ಕಂಪನಿ ಹಾಗೂ ರಾಜ್ಯ ಸರ್ಕಾರ ಮಾಡುತ್ತಿವೆ ಎಂದು ಆಕ್ರೋಶ ಹೊರಹಾಕಿದರು.

ರೈತರ ಜಮೀನಿಗೆ ತೆರಳಿ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಆ ಜಮೀನಿನ ರೈತರ ಸಮಕ್ಷಮ ಪರಿಶೀಲಿಸಬೇಕೆಂಬ ನಿಯಮವಿದೆ. ಆ ಜಮೀನಿನ ರೈತನಿಗೆ ಮಾಹಿತಿ ಕೊಡದೆ ತಮ್ಮ ಮನಸ್ಸಿಗೆ ಬಂದಂತೆ ಫಸಲು ಟೆಸ್ಟ್​ ಮಾಡಿ ವರದಿ ಕಳುಹಿಸಿ ರೈತರಿಗೆ ಮೋಸ ಮಾಡಿದ್ದಾರೆ ಎಂದು ದೂರಿದರು.

ವಿಮಾ ಕಂಪನಿಯವರು ರೈತರಿಂದ ವಿಮೆ ಕಂತು ಕಟ್ಟಿಸಿಕೊಂಡು ಪರಿಹಾರ ಕೊಡದಿದ್ದರೆ ವಿಮಾ ಕಂಪನಿ ಏತಕ್ಕೆ ಬೇಕು ಎಂದು ಪ್ರಶ್ನಿಸಿದ ಅರವಿಂದ ಕುಲಕರ್ಣಿ, ಕೂಡಲೇ ಇಂಗಳೇಶ್ವರ ಗ್ರಾಮದ ರೈತರಿಗೆ ತೊಗರಿ ಪರಿಹಾರ ಕೊಡದಿದ್ದರೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗ್ರಾಮದ ರೈತರಾದ ರುದ್ರಯ್ಯ ಹಿರೇಮಠ, ನಿಂಗಯ್ಯ ಅಚನೂರ, ಈರಪ್ಪ ಕಡಗೋಲ, ಕಲ್ಲಪ್ಪ ಕಾಳಗಿ, ಶಿವಾನಂದ ಬಾಗೇವಾಡಿ, ಸಿದ್ದಪ್ಪ ಶೇಖಣ್ಣವರ, ರೇವಣಸಿದ್ದ ಶೇಖಣ್ಣವರ, ಸಿದ್ದಪ್ಪ ಜಕ್ಕನ್ನವರ, ದುಂಡಪ್ಪ ಹದಿಮೂರ, ಸಿದ್ಲಿಂಗಪ್ಪ ನಂದಿ, ರ್ಯಾವಯ್ಯ ಹಿರೇಮಠ, ಪರಪ್ಪ ಬಾಗೇವಾಡಿ, ಭೀಮಪ್ಪ ಬಾಗೇವಾಡಿ, ರುದ್ರಯ್ಯ ಹಿರೇಮಠ, ಸಿದ್ದಪ್ಪ ಪತ್ತಾರ, ಶ್ರೀಶೈಲ ಸಜ್ಜನ, ಮಲ್ಲಿಕಾರ್ಜುನ ಸಜ್ಜನ, ಸಂಗಪ್ಪ ಚೌಕಿಮಠ, ಶರಣಪ್ಪ ಉಕ್ಕಲಿ, ಕಲ್ಯಾಣಿ ಕಾಳಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net