ತುಟ್ಟಿಭತ್ಯೆ ಅನ್ಯಾಯ ವಿರುದ್ಧ ಬೀಡಿ ಕಾರ್ಮಿಕರ ಪ್ರತಿಭಟನೆ: ಜುಲೈ 11ರಿಂದ ಅನಿರ್ದಿಷ್ಟಾವಧಿ ಸಾಮೂಹಿಕ ಧರಣಿಗೆ ಸಂಘಟಿತ ನಿರ್ಧಾರ

web - beedi
Published on

ಬಂಟ್ವಾಳ: 2024 ಏಪ್ರಿಲ್ 1ರಿಂದ ಬೀಡಿ ಕಾರ್ಮಿಕರಿಗೆ ಮಾಲೀಕರು ಕೊಡಬೇಕಾಗಿದ್ದ 22.72 ರೂ. ತುಟ್ಟಿಭತ್ಯೆಯಲ್ಲಿ ಸುಮಾರು 11.26 ರೂ. ಕಡಿತ ಮಾಡಿ ಸಾವಿರ ಬೀಡಿಗೆ ಕೇವಲ 11.46 ರೂ.ನ್ನು ಬೀಡಿ ಮಾಲೀಕರು ತಮ್ಮ ಗುತ್ತಿಗೆದಾರರ ಮೂಲಕ ಕಾರ್ಮಿಕರಿಗೆ ಪಾವತಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ಎಐಟಿಯುಸಿ ಹಾಗೂ ಸಿಐಟಿಯು ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಜುಲೈ 11 ರಿಂದ ಮಂಗಳೂರಿನ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯ ಎದುರು ಅನಿರ್ದಿಷ್ಟಾವಧಿ ಸಾಮೂಹಿಕ ಧರಣಿ ನಡೆಸಲು ತೀರ್ಮಾನಿಸಿವೆ.

ಅನಕ್ಷರಸ್ಥ ಬೀಡಿ ಕಾರ್ಮಿಕರಿಗೆ ವಂಚನೆ ಆರೋಪ

ಬೀಡಿ ಕಾರ್ಮಿಕರಿಗೆ ತುಟ್ಟಿಭತ್ಯೆ ಶೀಘ್ರ ಪಾವತಿಸುವಂತೆ ಆಗ್ರಹಿಸಿ, ಕಳೆದ ಮೇ 16ರಿಂದ ಜಿಲ್ಲೆಯಾದ್ಯಂತ ವಿವಿಧ ಹಂತದ ಹೋರಾಟಗಳು ನಡೆದಿತ್ತು. ಅಲ್ಲದೆ ಮಂಗಳೂರಿನ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯಲ್ಲೂ ಸಂಧಾನ ಮಾತುಕತೆಗಳೂ ನಡೆದಿತ್ತು. ಇದ್ಯಾವುದಕ್ಕೂ ಬೆಲೆ ಕೊಡದೆ ಮಾಲೀಕರು ಕಾನೂನು ಪ್ರಕಾರ ಕೊಡಬೇಕಾದ ತುಟ್ಟಿಭತ್ಯೆಯನ್ನು ವಂಚಿಸಿ, ಅನಧಿಕೃತ ಕಡಿತ ಮಾಡಿ ಬೀಡಿ ಕಾರ್ಮಿಕರಿಗೆ ಪಾವತಿಸಿರುವುದು ಅಕ್ಷಮ್ಯ. ತುಟ್ಟಿಭತ್ಯೆ ಪೂರ್ಣ ಮೊತ್ತವನ್ನು ನೀಡದೆ 11.46 ರೂ. ನೀಡಿ ಅನಕ್ಷರಸ್ಥ ಬೀಡಿ ಕಾರ್ಮಿಕರನ್ನು ವಂಚಿಸಿರುವುದರ ವಿರುದ್ಧ ಮಾಲೀಕರ ಈ ನೀತಿಗೆ ಉಭಯ ಸಂಘಟನೆಗಳು ಪ್ರಬಲ ಪ್ರತಿರೋಧ ವ್ಯಕ್ತಪಡಿಸಿವೆ.

ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ

22.72 ರೂ. ತುಟ್ಟಿಭತ್ಯೆ ಜಾರಿಯಾಗುವ ತನಕ ಜುಲೈ 11ರಿಂದ ಮಂಗಳೂರಿನ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಕಾರ್ಮಿಕ ಭವನದ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ. ಬೀಡಿ ಕಾರ್ಮಿಕರು, ಲೇಬಲ್ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪಾಣೆಮಂಗಳೂರು ಫಿರ್ಕಾ ಬೀಡಿ ಜನರಲ್ ವರ್ಕರ್ಸ್ ಯೂನಿಯನ್(ಎಐಟಿಯುಸಿ) ಅಧ್ಯಕ್ಷೆ ಉಮಾವತಿ ಕುರ್ನಾಡು ಹಾಗೂ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net